ಬೆಂಗಳೂರು : ವೀಸಾ ಅವಧಿ ವಿಸ್ತರಣೆಗೆ ಕೋರಿ ಚೀನಾ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಚೀನಾ ವಿಮಾನಯಾನ ಆರಂಭವಾಗುವರೆಗೂ ಮಾತ್ರ ಭಾರತದಲ್ಲಿ ಉಳಿಯಲು ಅವರಿಗೆ ಅನುಮತಿ ನೀಡುವುದನ್ನು ಸಕ್ಷಮ ಪ್ರಾಧಿಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ವೀಸಾ ಅವಧಿ ಮುಗಿದಿರುವ ಕಾರಣ ಭಾರತ ಬಿಟ್ಟು ತೆರಳುವಂತೆ ಸೂಚಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಓ) ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಲಿ ಡೊಂಗ್ ಎಂಬ 42 ವರ್ಷದ ಚೀನಾ ಮಹಿಳೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ವೀಸಾ ಅವಧಿ ಮುಗಿದಿರುವ ಕಾರಣ ಭಾರತ ಬಿಟ್ಟು ತೆರಳುವಂತೆ ಸೂಚಿಸಿ ಅರ್ಜಿದಾರರಿಗೆ 2021ರ ನ.11ರಂದು ಎಫ್‌ಆರ್‌ಆರ್‌ಓ ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೀಸಾ ಅವಧಿ ವಿಸ್ತರಣೆಗೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಅರ್ಜಿದಾರರಿಗೆ 2019ರ ಜೂ.22ರಂದು ವೀಸಾ ನೀಡಿದ್ದು, ಅದರ ಅವಧಿ 2019ರ ಅ.30ಕ್ಕೆ ಮುಕ್ತಾಯಗೊಂಡಿದೆ. ಆಗಲೇ ಅವರು ಭಾರತ ಬಿಟ್ಟು ತೆರಳಬೇಕಿತ್ತು.
ಆದರೆ, ಕೊರೊನಾ ಸೋಂಕು ಹರಡುತ್ತಿರುವುದರಿಂದ 2020ರ ಫೆ.19ರಿಂದ ಮಾ.30ರವರೆಗೆ ವೀಸಾ ಅವಧಿ ವಿಸ್ತರಣೆ ಮಾಡಿಕೊಡಲಾಗಿದೆ. ಅದಾದ ನಂತರ ಅರ್ಜಿದಾರೆ ವೀಸಾ ಅವಧಿಗೆ ಮತ್ತೆ ಮನವಿ ಮಾಡಿದ್ದು, ಆ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಂತರ್ರಾಷ್ಟ್ರೀಯ ಒಪ್ಪಂದಗಳ ಪ್ರಕಾರ ವಿದೇಶಿಯರಿಗೆ ಅವರಿಗೆ ಇರುವ ಹಕ್ಕುಗಳಿಗಿಂತ ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಿಲ್ಲ. ಹಾಗಿದ್ದೂ, ತನ್ನನ್ನು ಏಕೆ ದೇಶ ಬಿಟ್ಟು ತೆರಳುವಂತೆ ನೋಟಿಸ್ ನೀಡಿದ್ದೀರಿ ಎಂದು ಪ್ರಶ್ನಿಸುವುದು ಉದ್ದಟತನವಾಗುತ್ತದೆ. ಅಲ್ಲದೇ, ಸಂಬಂಧಪಟ್ಟ ಪ್ರಾಧಿಕಾರವು ಅನುಮತಿ ನೀಡದಿದ್ದರೂ ಅರ್ಜಿದಾರರು ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ಕಾನೂನು ಪ್ರಕಾರ ವೀಸಾ ಅವಧಿ ಮುಕ್ತಯಗೊಂಡ ನಂತರ ವಿದೇಶಿಯರು ಭಾರತವನ್ನು ಬಿಟ್ಟು ತೆರಳಬೇಕು. ಈಗಾಗಲೇ ವೀಸಾ ಅವಧಿ ಮುಗಿದರೂ ಸಾಕಷ್ಟು ಸಮಯದಿಂದ ಭಾರತದಲ್ಲೇ ಉಳಿದಿರುವುದರಿಂದ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು ಎಂದು ತಿಳಿಸಿ, ಅರ್ಜಿ ವಜಾಗೊಳಿಸಿದೆ. ಹಾಗೆಯೇ, ಚೀನಾ ವಿಮಾನಯಾನ ಪ್ರಾರಂಭವಾಗುವರೆಗೂ ಭಾರತದಲ್ಲಿ ಉಳಿಯಲು ಅರ್ಜಿದಾರರಿಗೆ ಅನುಮತಿ ನೀಡುವುದು ಸಕ್ಷಮ ಪ್ರಾಧಿಕಾರದ ವಿವೇಚನೆಗೆ ಬಿಟ್ಟಿದೆ ಹೊರತು ತದ ನಂತರ ಸಮಯಕ್ಕೆ ಅಲ್ಲ ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸ್ನೇಹಿತರ ಮಧ್ಯೆ ಬೈಕ್ ಓಡಿಸುವ ಸಲುವಾಗಿ ಗಲಾಟೆ : ಗೆಳೆಯನ ಕೊಂದು ನದಿಗೆ ಎಸೆದ ಕಿರಾತಕರು