ಬೆಂಗಳೂರು : ಐಎಂಎ ವಂಚನೆ ಪ್ರಕರಣ ಸಂಬಂಧ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಐಎಂಎ ವಂಚನೆ ಪ್ರಕರಣದಲ್ಲಿ ಈ ಇಬ್ಬರು ಐಪಿಎಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ದಾಖಲೆಗಳ ಸಮೇತ ಸಿಬಿಐ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದೀಗ ರಾಜ್ಯ ಸರ್ಕಾರ ಕಾನೂನು ಇಲಾಖೆ ಹಾಗೂ ಎಜಿ ಅಭಿಪ್ರಾಯದ ಮೇರೆಗೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅದೇ ರೀತಿ ಆಗ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಡಿವೈಎಸ್ಪಿಯಾಗಿದ್ದ ಇ ಬಿ ಶ್ರೀಧರ್, ಆಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಎಂ ರಮೇಶ್ ಮತ್ತು ಎಸ್ಐ ಗೌರಿಶಂಕರ್ ವಿರುದ್ಧ ತನಿಖೆ ನಡೆಸಲೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಐಎಂಎ ವಂಚನೆ ಪ್ರಕರಣದಲ್ಲಿ ಇ ಬಿ ಶ್ರೀಧರ್ ಎ-31 ಆಗಿದ್ರೆ, ಇನ್ಸ್‌ಪೆಕ್ಟರ್ ಎಂ.ರಮೇಶ್ ಎ-34 ಮತ್ತು ಎಸ್ಐ ಗೌರಿಶಂಕರ್ ಎ-35 ಆಗಿದ್ದಾರೆ. ಇವರು ಐಎಂಎ ಪ್ರಕರಣ ಮುಚ್ಚಿ ಹಾಕಲು ಪ್ರಮುಖ ಆರೋಪಿ ಮೊಹ್ಮದ್ ಮನ್ಸೂರ್ ಖಾನ್ರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಐಪಿಎಸ್ ಅಧಿಕಾರಿಗಳ ಮೇಲಿನ ಆರೋಪ ಏನು?: ಸಿಬಿಐ ತನ್ನ ವರದಿಯಲ್ಲಿ ಜುಲೈ 2018ರಲ್ಲಿ ಆರ್ಬಿಐ ನಿಯಮ ಉಲ್ಲಂಘನೆ ಆರೋಪದಡಿ ಐಎಂಎ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗಿನ ಸಿಐಡಿ ಡಿಜಿಪಿಗೆ ಪೊಲೀಸ್ ಮಹಾ ನಿರ್ದೇಶಕರು ಆದೇಶಿಸಿದ್ದರು. ಈ ಸಂಬಂಧ ತನಿಖೆ ನಡೆಸಲು ಆಗಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಡಿವೈಎಸ್ ಪಿ ಇ.ಬಿ.ಶ್ರೀಧರ್‌ಗೆ ಸೂಚಿಸಲಾಗಿತ್ತು.
ಸಿಐಡಿ ಆರ್ಥಿಕ ಅಪರಾಧ ವಿಭಾಗದ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಈ ತನಿಖೆಯ ಉಸ್ತುವಾರಿ ವಹಿಸಿದ್ದರು. ಡಿವೈಎಸ್‌ಪಿ ಇ ಬಿ ಶ್ರೀಧರ್ ಕೈಗೊಂಡ ತನಿಖಾ ವರದಿಯನ್ನು ಅನಮೋದಿಸಿದ ನಿಂಬಾಳ್ಕರ್ 2019 ಜನವರಿಯಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಜೊತೆಗೆ ಪತ್ರ ಬರೆದು ಐಎಂಎ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಹೀಗಾಗಿ, ತನಿಖೆ ನಿಲ್ಲಿಸುವಂತೆ ಶಿಫಾರಸು ಮಾಡಿದ್ದರು. ಜೊತೆಗೆ ಹೆಚ್ಚುವರಿ ತನಿಖೆಗೆ ನಿಂಬಾಳ್ಕರ್ ತಡೆಯೊಡ್ಡಿದ್ದರು ಎಂದು ಸಿಬಿಐ ತನ್ನ ವರದಿಯಲ್ಲಿ ಆಪಾದಿಸಿದೆ.
ಆಗ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಅವರು ತಮ್ಮ ಕಿರಿಯ ಅಧಿಕಾರಿಗಳು ನೀಡಿದ್ದ ಐಎಂಎ ಸಂಸ್ಥೆ ವಿರುದ್ಧದ ಅವ್ಯವಹಾರದ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲು ವಿಳಂಬ ಮಾಡಿದ್ದರು. ಇತರ ಸರ್ಕಾರಿ ಅಧಿಕಾರಿಗಳ ಜೊತೆಗೂಡಿ ಹಿಲೋರಿ ಐಎಂಎ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದಂತೆ ರಕ್ಷಿಸಿದರು. ಮತ್ತು ಐಎಂಎ ಸಂಸ್ಥೆಯಿಂದ ಕಾನೂನು ಬಾಹಿರ ಲಾಭಗಳನ್ನು ಪಡೆದಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ಆರೋಪಿಸಿದೆ.