ದೊಡ್ಡಬಳ್ಳಾಪುರ : ಬಯಲು ಸೀಮೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಬೆಳೆ ರಾಗಿ, ಈ ಬಾರಿ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಬಂಪರ್ ರಾಗಿ ಫಸಲು ಬಂದಿದ್ದು, ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದೆ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಕಿಂಟಾಲ್ ರಾಗಿ ಖರೀದಿಸುವ ಗುರಿ ಇದ್ದು, ರೈತರು ಮುಗಿಬಿದ್ದು ರಾಗಿ ಖರೀದಿಗೆ ಕೇಂದ್ರಕ್ಕೆ ರಾಗಿ ಫಸಲು ಹಾಕುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆಯಾಶ್ರಿತ ಬೆಳೆಯಾಗಿ ರಾಗಿಯನ್ನು ಬೆಳೆಯಲಾಗುತ್ತೆ, ಈ ಬಾರಿ ಮುಂಗಾರು ಶುರುವಾಗುವ ಮುನ್ನವೇ ಕೊರೊನಾ ವೈರಸ್ ಪ್ರಪಂಚದಾದ್ಯಂತ ಅವರಿಸಿತು. ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದ್ಯಾಂತ ಲಾಕ್ ಡೌನ್ ಜಾರಿ ಮಾಡಲಾಗಿತ್ತು, ಲಾಕ್ ಡೌನ್ ನಿಂದ ನಗರಗಳಲ್ಲಿ ಕೆಲಸ ಕಳೆದುಕೊಂಡ ಯುವಕರು ಹಳ್ಳಿಗಳಿಗೆ ಮರಳಿ ಬೇಸಾಯ ಆರಂಭಿಸಿದ್ದರು, ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಿತ್ತು, ಜೊತೆಗೆ ಉತ್ತಮ ಮಳೆಯಿಂದ ಬಂಪರ್ ರಾಗಿ ಫಸಲು ಬಂದಿದೆ.
20582 ರೈತರಿಂದ 4 ಲಕ್ಷ ಟನ್ ರಾಗಿ ಖರೀದಿಯ ಗುರಿ :
ಬಂಪರ್ ರಾಗಿ ಫಸಲು ಬಂದಿರುವುದರಿಂದ ರೈತರು ತಮ್ಮ ಅವಶ್ಯಕತೆ ಬೇಕಾಗುವಷ್ಟು ರಾಗಿಯನ್ನು ಉಳಿಸಿಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡುತ್ತಿದ್ದಾರೆ, ರೈತರಿಂದ ರಾಗಿ ಖರೀದಿಸಲು ಸರ್ಕಾರ ಪ್ರತಿ ತಾಲೂಕಿನಲ್ಲೂ ರಾಗಿ ಖರೀದಿ ಕೇಂದ್ರ ತೆರೆದಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಪೇಟೆ, ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 20582 ರೈತರು ನೊಂದಾಯಿಸಿಕೊಂಡಿದ್ದು ಒಟ್ಟು 409982.25 ಕಿಂಟಾಲ್ ಖರೀದಿಸುವ ಗುರಿ ಇದೆ. ಈಗಾಗಲೇ 6355 ರೈತರು ಒಟ್ಟು 130 924.75 ಕಿಂಟಾಲ್ ರಾಗಿಯನ್ನ ಖರೀದಿ ಕೇಂದ್ರಕ್ಕೆ ಹಾಕಿದ್ದಾರೆ. ಮಾರ್ಚ್ 15ರ ವರೆಗೂ ಖರೀದಿ ಕೇಂದ್ರದಿಂದ ರಾಗಿ ತೆಗೆದುಕೊಳ್ಳಲಾಗುವುದು, ಖರೀದಿ ಕೇಂದ್ರವನ್ನು ಈ ತಿಂಗಳ ಅಂತ್ಯದ ವರೆಗೂ ತೆರೆಯುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಕಿಂಟಾಲ್ ರಾಗಿ ಗೆ 3295 ರೂಪಾಯಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಸರ್ಕಾರ ಖರೀದಿ ಮಾಡುತ್ತಿದೆ. ಇದರಿಂದ ರೈತರಿಗೆ ಸಮಾಧಾನಕರ ಬೆಲೆ ಸಿಕ್ಕಿದೆ. ಸ್ವಾಮಿನಾಥನ್ ವರದಿ ಪ್ರಕಾರ 1 ಕಿಂಟಾಲ್ ರಾಗಿಗೆ 5200 ರೂಪಾಯಿ ಕನಿಷ್ಠ ಬೆಂಬಲ ಬೆಲೆಯನ್ನ ಸರ್ಕಾರ ಘೋಷಣೆ ಮಾಡ ಬೇಕಿತ್ತು, ಈ ಬೆಲೆ ರೈತರಿಗೆ ಸಿಕ್ಕಿರೆ ರಾಗಿ ಸಹ ಲಾಭದಾಯಕ ಬೆಳೆಯಾಗಲಿದೆ.