ದೇವನಹಳ್ಳಿ: ವಿಮಾನದಲ್ಲಿ ಪ್ರಯಾಣಿಕರ ಸೀಟ್ ಕೆಳಗೆ ಮರೆಮಾಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಚಿನ್ನದ ತುಂಡುಗಳು ಹಾಗೂ ಪೇಸ್ಟ್ ರೂಪದಲ್ಲಿದ್ದ 61 ಲಕ್ಷ ರೂ. ಮೌಲ್ಯದ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನದ ಆಸನವೊಂದರ ಕೆಳಗೆ ಚಿನ್ನವನ್ನು ಮರೆಮಾಚಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಎಲ್ಲ ಪ್ರಯಾಣಿಕರು ವಿಮಾನದಿಂದ ಇಳಿದ ತಕ್ಷಣ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಎಕಾನಮಿ ಕ್ಲಾಸ್‌ನ ಆಸನದ ಕೆಳಗೆ ಒಂದು ಪ್ಯಾಕೆಟ್ ಪತ್ತೆಯಾಗಿದೆ. ಪ್ಯಾಕೆಟ್ ತೆರೆದಾಗ ಕತ್ತರಿಸಿದ ಚಿನ್ನದ 29 ತುಂಡುಗಳು ಮತ್ತು ಚಿನ್ನದ ಪೇಸ್ಟ್ ಪತ್ತೆಯಾಗಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
599 ಗ್ರಾಂ ತೂಕದ ಚಿನ್ನದ ತುಂಡುಗಳು ಮತ್ತು 701 ಗ್ರಾಂ ಚಿನ್ನದ ಪೇಸ್ಟ್ ಇರುವುದು ಪತ್ತೆಯಾಗಿದೆ. ಇದರ ಮಾರುಕಟ್ಟೆ ಬೆಲೆಯು 61 ಲಕ್ಷ ರೂ. ಎಂದು ತಿಳಿದು ಬಂದಿದೆ. ಕಳ್ಳಸಾಗಾಣಿಕೆದಾರರನ್ನು ಪತ್ತೆ ಹಚ್ಚಲು ಪ್ರಯಾಣಿಕರ ಪಟ್ಟಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಕಳ್ಳಸಾಗಾಣಿಕೆದಾರನು ಚಿನ್ನವನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ಅದನ್ನು ಅಲ್ಲೇ ಇರಿಸಿ, ಮುಂದೆ ಇನ್ನೊಬ್ಬ ವ್ಯಕ್ತಿ ಅದನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಾಗಿತ್ತಾ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಹೋರಾಟದ ಹೆಸರಲ್ಲಿ ದೇವರಾಣೆ ನಾನು ಮಂತ್ರಿ ಆಗಿಲ್ಲ: ಸಚಿವ ನಿರಾಣಿ