ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸೀಜ್ ಮಾಡಿದ್ದಾರೆ. ಅಂದಹಾಗೆ ಮಲೇಶಿಯಾದಿಂದ ಪ್ರಯಾಣಿಕರು ಏರ್ಪೋರ್ಟ್ಗೆ ಬಂದಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಚಿನ್ನ ಕಳ್ಳ ಸಾಗಣಿಕೆಗಾಗಿಯೇ ವಿಶೇಷ ಒಳ ಉಡುಪು ಮಾಡಿಸಿದ್ದು ಕಂಡು ಬಂದಿದೆ. ಇನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಗೊತ್ತಾಗದಂತೆ ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಸಾಗಣೆಗೆ ಯತ್ನ ನಡೆಸಿದ್ದರು ಎಂದು ಗೊತ್ತಾಗಿದೆ. ಹಾಗೆಯೇ ಪೇಸ್ಟ್ ರೂಪದಲ್ಲಿ ತಂದಿದ್ದ 2.2 ಕೆಜಿಯ 1 ಕೋಟಿ 33 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಇಕೆ 568 ವಿಮಾನದಲ್ಲಿ ಬಂದಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕೆ.ವಿ. ನಿಲ್ದಾಣದಲ್ಲಿ ಬಾಂಗ್ಲಾ ಪ್ರಜೆಗಳ ಬಂಧನ: ಬಾಂಗ್ಲಾದೇಶದಿಂದ ಬೆಂಗಳೂರಿಗೆ ಅಕ್ರಮ ಪಾಸ್ಪೋರ್ಟ್ ಮೂಲಕ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಲಿಯಾಕತ್ ಆಲಿ ಮತ್ತು ರಿಜಾಉಲ್ ಶೇಕರ್ ಎನ್ನುವವರು ಏಪ್ರಿಲ್ 2 ರಂದು ಸಿಂಗಾಪುರ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಬಂದಿದ್ದ ಮಾಹಿತಿ ಮೇರೆಗೆ ವಿಮಾನ ನಿಲ್ದಾಣ ಸಿಬ್ಬಂದಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಇಬ್ಬರು ಆರೋಪಿಗಳು ತಮ್ಮ ಹೆಸರನ್ನುಲಿಯಾಕತ್ ಶೇಖ್ ಮತ್ತು ರೀಗನ್ ಶೇಖ್ ಎಂಬ ಹೆಸರಿನಲ್ಲಿ ಭಾರತೀಯ ಅಕ್ರಮ ಪಾಸ್ಪೋರ್ಟ್ ಪಡೆದು ಬೆಂಗಳೂರಿಗೆ ಬಂದಿರುವುದು ತಿಳಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ವಿದೇಶಿ ಕರೆನ್ಸಿ ವಶಕ್ಕೆ: ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿಗಟ್ಟಲೆ ವಿದೇಶಿ ಕರೆನ್ಸಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಮೂವರು ಪ್ರಯಾಣಿಕರು ಬ್ಯಾಂಕಾಕ್ಗೆ ಅಕ್ರಮವಾಗಿ ವಿದೇಶಿ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬ್ಯಾಗ್ನಲ್ಲಿ ಹಣ ಇಟ್ಟುಕೊಂಡು ಸಾಗಿಸುತ್ತಿದ್ದರು. 1,41,12,961 ರೂಪಾಯಿ ವಿದೇಶಿ ಹಣ ಪತ್ತೆಯಾಗಿದೆ. ಯುಎಸ್ಡಿ, ಯುರೋ, ಸ್ಪಿಸ್, ಪ್ರಾನ್ಸ್, ಮತ್ತು ಥಾಯ್ ಬಾಹ್ತ್ ಕರೆನ್ಸಿ ಇದಾಗಿದೆ. ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಹಣದ ಸಮೇತ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಹೈದರಾಬಾದ್ ವಿ. ನಿಲ್ದಾಣದಲ್ಲಿ ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು: ಹೈದರಾಬಾದ್ನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು 7 ಕೋಟಿ ಮೌಲ್ಯದ ಅಕ್ರಮ ಚಿನ್ನವನ್ನು ಇದೇ ಫೆಬ್ರವರಿಯಂದು ವಶಪಡಿಸಿಕೊಂಡಿದ್ದರು. ಶಾರ್ಜಾ ಮೂಲಕ ಸುಡಾನ್ನಿಂದ ಹೈದರಾಬಾದ್ಗೆ ಬಂದ 23 ಪ್ರಯಾಣಿಕರನ್ನು ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿತ್ತು. ಗುಪ್ತಚರ ಅಧಿಕಾರಿಗಳ ಮಾಹಿತಿ ಮೇರೆಗೆ ಜಿ9 458 ವಿಮಾನದಲ್ಲಿ ಕಸ್ಟಮ್ ಅಧಿಕಾರಿಗಳು ತನಿಖೆ ನಡೆಸಿದಾಗ 14.9063 ಗ್ರಾಂ ಚಿನ್ನ ಪತ್ತೆಯಾಗಿತ್ತು. ಈ 23 ಪ್ರಯಾಣಿಕರು ಶೂ, ಟೈ ಮತ್ತು ತಮ್ಮ ಬಟ್ಟೆಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖರನ್ನು ಬಂಧಿಸಿ ಉಳಿದವರ ವಿಚಾರಣೆ ನಡೆಸಿದೆ. ಈ ಎಲ್ಲಾ ಬಂಧಿತರು ಸುಡಾನ್ ದೇಶದವರೆಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಬಂದಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ