ಆನೇಕಲ್: ಅಪ್ರಾಪ್ತೆಯನ್ನ ರಾತ್ರಿಯಿಡೀ ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹದಿನೈದು ವರ್ಷದ ಅಪ್ರಾಪ್ತೆಯನ್ನು ಬೆದರಿಸಿ ಕೊಠಡಿಗೆ ಕರೆದೊಯ್ದು ಕೂಡಿ ಹಾಕಿದ್ದ ಕೀಚಕರು ಅತ್ಯಾಚಾರ ವೆಸಗಿದ್ದಾರೆ. ತಡರಾತ್ರಿಯವರೆಗೂ ಮಗಳು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಡುತ್ತಿರುವಾಗ ಪೋಷಕರ ಕಣ್ಣಿಗೆ ಕಾಣಿಸಿಕೊಂಡಿದ್ದ ಆರೋಪಿಗಳು ಏನೂ ಅರಿಯದಂತೆ ನಾಟಕವಾಡಿದ್ದರು.
ಯುವಕರು ಬೆಳಗ್ಗೆ 5 ಗಂಟೆವರೆಗೆ ಅಪ್ರಾಪ್ತೆ ಜತೆಯಿದ್ದು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ ಬಾಲಕಿ ತನ್ನ ಮನೆಗೆ ಹಿಂತಿರುಗಿದಾಗ ಪೋಷಕರು ಗದರಿಸಿ ಕೇಳಿದರೂ ಅತ್ಯಾಚಾರ ವಿಷಯ ಬಾಯ್ಬಿಟ್ಟಿರಲಿಲ್ಲ. ಪೋಷಕರ ತಾಳ್ಮೆ ಕಟ್ಟೆಯೊಡೆದು ಆಕೆಗೆ ಬಾರಿಸಿದಾಗ ಹೆದರಿ ಸತ್ಯ ಹೇಳಿದ್ದಾಳೆ. ಆರೋಪಿ ಅರುಣ್ ಮತ್ತು ಕೆಂದ ಎಂದು ಕರೆಯುವ ಇಬ್ಬರು ಯುವಕರು ಬಲವಂತವಾಗಿ ಅತ್ಯಾಚಾರ ನಡೆಸಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಆಗ ಎಚ್ಚೆತ್ತ ಪೋಷಕರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೂಡಲೇ ಬೆಂಗಳೂರು ಆನೇಕಲ್ ಉಪವಿಭಾಗ ಡಿವೈಎಸ್ಪಿ ನಂಜುಂಡಗೌಡ ಆರೋಪಿ ಅರುಣ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಕೆಂದ ಎಂಬ ಅಡ್ಡ ಹೆಸರಿನಿಂದ ಕರೆದಿಕೊಳ್ಳುವ ಆರೋಪಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.