ನೆಲಮಂಗಲ: ಮಕರ ಸಂಕ್ರಾಂತಿಯ ದಿನದಂದು ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ತೀರ್ಥೋತ್ಬವವಾಗುವ ನೀರನ್ನು ತಂದು ಗಿರಿಜೆ ಮತ್ತು ಶಿವನ ಕಲ್ಯಾಣೋತ್ಸವ ನೆರೆವೇರಿಸಲಾಯಿತು.
ನೆಲಮಂಗಲ ತಾಲೂಕಿನ ಪ್ರಸಿದ್ಧ ಕ್ಷೇತ್ರ ಶಿವಗಂಗೆ, ಚಾರಣಿಗರ ಸ್ವರ್ಗ, ಶಿವನ ಭಕ್ತರ ಪವಿತ್ರ ಕ್ಷೇತ್ರ ದಕ್ಷಿಣ ಕಾಶಿ ಅಂತಾನೇ ಪ್ರಖ್ಯಾತವಾಗಿರುವ ಶಿವಗಂಗೆಯಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಮಣದ ದಿನ ಗಿರಿಜಾ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನೆರೆವೇರಿತು.
ಸಮುದ್ರ ಮಟ್ಟದಿಂದ 4.547 ಅಡಿ ಎತ್ತರದಲ್ಲಿ ಇರುವ ಬೆಟ್ಟದ ತುತ್ತತುದಿಯ ಉರಿಕಂಬ ಹಾಗೂ ತೀರ್ಥಕಂಬದ ನಡುವಿನ ಬಂಡೆಯಲ್ಲಿ ಮಕರ ಸಂಕ್ರಾಂತಿಯ ದಿನ 11.31 ಕ್ಕೆ ನಿಮಿಷಕ್ಕೆ ಮಕರ ಲಗ್ನದಲ್ಲಿ ಗಂಗೆ ಉಗಮವಾಗಿ, ಅನಂತರ ಮಧ್ಯಾಹ್ನ 1 ರಿಂದ 01:30 ರ ಮಕರ ಲಗ್ನದಲ್ಲಿ ಗಂಗೋತ್ಪತ್ತಿಯಾದ ತೀರ್ಥವನ್ನು ಬೆಟ್ಟದ ತುದಿಯಿಂದು ತಂದು ಗಂಗಾಧರೇಶ್ವರನಿಗೆ ಧಾರಾ ಮಹೋತ್ಸವ ನಡೆಸುವ ಮೂಲಕ ಗಿರಿಜಾ ಕಲ್ಯಾಣೋತ್ಸವ ಮಾಡಲಾಯಿತು.
ಈ ಬಾರಿ ಬೆಟ್ಟದ ತುತ್ತತುದಿಯಲ್ಲಿ ಹೇರಳವಾಗಿ ಗಂಗೆಯ ಉಗಮ ಆದ್ದರಿಂದ ರಾಜ್ಯದಲ್ಲಿ ಉತ್ತಮ ಮಳೆಬೆಳೆಯಾಗಿ ಸಮೃದ್ಧಿಯಾಗಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಪೌರಾಣಿಕ ಹಿನ್ನೆಲೆ :
ಗಿರಿಜಾ ಕಲ್ಯಾಣ ವಿವಾಹ ಸಂಬಂಧ ಶಿವಭಕ್ತನಾದ ಅಗಸ್ತ್ಯ ಮುನಿಗಳಿಗೂ ವಿಶೇಷ ಆಹ್ವಾನವಿರುತ್ತದೆ. ಆದರೆ, ಕಲ್ಯಾಣೋತ್ಸವದ ದಿನ ಕಾರಣಾಂತರಗಳಿಂದ ಅಗಸ್ತ್ಯ ಮುನಿಗಳು ಸಕಾಲದಲ್ಲಿ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಬೇಸರಗೊಂಡ ಅಗಸ್ತ್ಯ ಮುನಿಗಳು, ನಾನು ನಿಮ್ಮ ಕಲ್ಯಾಣವನ್ನು ನೋಡಲು ಸಾಧ್ಯವಾಗಲಿಲ್ಲ. ನಿಮ್ಮ ಮದುವೆಯನ್ನು ನೋಡುವುದು ನನ್ನ ಜೀವನದ ಮಹಾದಾಸೆಯಾಗಿತ್ತು. ಆದರೆ, ನನಗೆ ನೋಡಲು ಆಗಲಿಲ್ಲ ಎಂದು ಶಿವನ ಬಳಿ ನೋವು ತೋಡಿಕೊಳ್ಳುತ್ತಾರಂತೆ.
ಆಗ ಶಿವನು, ನಿಮಗೆ ಪ್ರತಿ ವರ್ಷ ನನ್ನ ಕಲ್ಯಾಣೋತ್ಸವ ನೋಡುವ ಅವಕಾಶ ಕಲ್ಪಿಸಲಾಗುವುದು. ನನ್ನ ಮತ್ತು ಗಿರಿಜೆಯ ಕಲ್ಯಾಣೋತ್ಸವವನ್ನು ಪ್ರತಿ ವರ್ಷ ಶಿವಗಂಗೆಯಲ್ಲಿ ಆಚರಿಸುವಂತೆ ಅಗಸ್ತ್ಯ ಮುನಿಗಳಿಗೆ ತಿಳಿಸುತ್ತಾನೆ. ಪರಶಿವನ ಆದೇಶದಂತೆ ಅಗಸ್ತ್ಯ ಮುನಿಗಳು ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಆಚರಿಸಿ ಆ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಗಿರಿಜಾ ಕಲ್ಯಾಣವನ್ನು ಶಿವಗಂಗೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.