ನೆಲಮಂಗಲ: ಕೊಟ್ಟ ಸಾಲ ಕೇಳಿದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಸೊಲದೇವನಹಳ್ಳಿಯ ಎಮ್ಎಸ್ಪಿಪಿ ಬಡಾವಣೆಯಲ್ಲಿ ನಡೆದಿದೆ. ಸೊಲದೇವನಹಳ್ಳಿ ನಿವಾಸಿ ರವಿಕುಮಾರ್ ಸ್ನೇಹಿತನಿಂದಲೇ ಹತ್ಯೆಯಾದ ದುರ್ದೈವಿ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಸೊಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೃತ ರವಿಕುಮಾರ್ ಸಣ್ಣಪುಟ್ಟ ಹಣಕಾಸಿನ ವ್ಯವಹಾರ ಮಾಡುತ್ತಿದ್ದ, ಸ್ನೇಹಿತನೇ ಆಗಿದ್ದ ಮಧುಸೂಧನ್ ಅಲಿಯಾಸ್ ಚಿತಾಲಿಗೆ ಒಂದೂವರೆ ವರ್ಷದ ಹಿಂದೆ 1 ಲಕ್ಷ ರೂ. ಕೊಟ್ಟಿದ್ದನಂತೆ. ಈ ಹಣ ವಾಪಸ್ ಕೇಳಿದಾಗ ಹಣ ಕೊಡಲು ಮಧುಸೂಧನ್ ನಿರಾಕರಿಸಿದ್ದನಂತೆ. ಇದು ಇಬ್ಬರ ವೈಮನಸಿಗೆ ಕಾರಣವಾಗಿತ್ತು.
ಈ ವಿಷಯ ಮಧುಸೂಧನ್ ಮನೆಯವರೆಗೂ ತಲುಪಿ ಆತನ ತಂದೆ, ಹಣ ಕೊಡುವುದಾಗಿ ಹೇಳಿದ್ದರಂತೆ. ಹಣ ವಾಪಸ್ ಕೇಳಿದಕ್ಕೆ ಸುಖಾಸುಮ್ಮನೆ ಖ್ಯಾತೆ ತೆಗೆದು ರವಿಕುಮಾರ್ ನನ್ನ ಮಧುಸೂಧನ್ ಕೆರಳಿಸುತ್ತಿದ್ದನಂತೆ. ಕಳೆದ ರಾತ್ರಿ ರವಿಕುಮಾರ್ ಎಮ್ಎಸ್ ಪಿಪಿ ಬಡಾವಣೆಯಲ್ಲಿ ವಾಕಿಂಗ್ ಮಾಡುತ್ತಿರುವ ಸಮಯದಲ್ಲಿ ಮಧುಸೂಧನ್ ಸ್ನೇಹಿತರಾದ ಶಂಕರ್ ಅಲಿಯಾಸ್ ಸುನಾಮಿ, ಪ್ರದೀಪ್ ಅಲಿಯಾಸ್ ಪ್ಲಾಸ್ಟಿಕ್ ಸೇರಿದಂತೆ 5 ಜನರು ಸೇರಿ ರವಿಕುಮಾರ್ ನನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಕುರಿತು ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಎಂ.ಎಂ.ಫುಡ್ ಸ್ಟ್ರೀಟ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ.. ಇಬ್ಬರ ಸಜೀವ ದಹನ