ದೊಡ್ಡಬಳ್ಳಾಪುರ: ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬೆಳೆದಿರುವ 20 ಟನ್ ಕುಂಬಳಕಾಯಿ ಮಾರುಕಟ್ಟೆಗೆ ಸಾಗಿಸಲಾಗದೇ ರೈತ ಸಂಕಷ್ಟಕ್ಕೆ ಸಿಲುಕಿರುವ ಘಟನೆ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.
ಗ್ರಾಮದ ರೈತ ಮಂಜುನಾಥ್ ಎಂಬುವವರು ಎಲೆಕೋಸು, ಟೊಮ್ಯಾಟೋ, ಬದನೆಕಾಯಿ ಬೆಳೆದು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಇದೇ ಮೊದಲ ಬಾರಿಗೆ ಕುಂಬಳಕಾಯಿ ಬೆಳೆದಿದ್ದರು. ಎರಡೂವರೆ ಎಕರೆಯಲ್ಲಿ ಕಷ್ಟ ಪಟ್ಟು ಕುಂಬಳಕಾಯಿ ಬೆಳೆದಿದ್ದರು. ಮೂರೂ ತಿಂಗಳ ಬೆಳೆಯಾದ ಕುಂಬಳಕಾಯಿ ಇದೀಗ ಕಟಾವಿಗೆ ಬಂದಿದೆ. ಸದ್ಯ ಕುಂಬಳಕಾಯಿ ಕಟಾವು ಮಾಡಿ ಅದನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತ ಪರದಾಡುತ್ತಿದ್ದಾನೆ.
ರೈತ ಮಂಜುನಾಥ್ ಸುಮಾರು 60 ಸಾವಿರ ರೂ. ಬಂಡವಾಳ ಹಾಕಿ ಕುಂಬಳಕಾಯಿ ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹಾಗಾಗಿ ಸರ್ಕಾರ ನಷ್ಟವನ್ನು ತುಂಬಿ ಕೊಡಬೇಕೆಂದು ಈ ಸಂದರ್ಭದಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾರೆ.