ದೊಡ್ಡಬಳ್ಳಾಪುರ: ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಈಡೇರಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ಬಡವರ ಹಸಿವು ತಣಿಸುವ ಬದಲು 29.5 ಲಕ್ಷ ಟನ್ ಅಕ್ಕಿಯನ್ನು ಎಥೆನಾಲ್(ಜೈವಿಕ ಇಂಧನ) ಉತ್ಪಾದನೆಗಾಗಿ ನೀಡಿದೆ. ಈ ಮೂಲಕ ಬಡವರ ಅನ್ನ ಕಿತ್ತುಕೊಂಡು ಮಹಾ ಪಾಪವನ್ನು ಪ್ರಧಾನಿ ಮೋದಿ ಮಾಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಅಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಚುನಾವಣಾಪೂರ್ವ ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿಗಳನ್ನು ನಿಗದಿತ ಅವಧಿಯಲ್ಲಿಯೇ ಜನರಿಗೆ ತಲುಪಿಸುತ್ತೇವೆ. ಈಗಾಗಲೇ ಎರಡು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಆದರೆ ಪ್ರಧಾನಿ ಮೋದಿ ಕೇವಲ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ನಾವು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ದೇಶದ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತೇವೆ ಎಂದು ಹೇಳಿ ಈವರೆಗೆ ಆ ಕೆಲಸ ಮಾಡಿಲ್ಲ. ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಹೇಳಿ ಇದ್ದ ಕೆಲಸಗಳನ್ನು ಕೂಡ ಕಿತ್ತುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರದಿಂದ ಬೇಸತ್ತ ಜನ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಾರೆ ಎಂದು ಟೀಕಿಸಿದರು.
ಮುಂದುವರೆದು, ವಿಶ್ವಸಂಸ್ಥೆಯಲ್ಲಿ 2030 ರ ವೇಳೆಗೆ ಹಸಿವು ಮುಕ್ತ ದೇಶ ನಿರ್ಮಾಣದ ನಿರ್ಣಯವಾಗಿದ್ದು, ಈ ನಿರ್ಣಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಹಿ ಹಾಕಿದ್ದರು. ಇದು ನಮ್ಮ ದೇಶದಲ್ಲಿಯೂ ಜಾರಿ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು. ಎಫ್ ಸಿ ಐನವರು ಗೋಡಾನ್ನಲ್ಲಿ 29.5 ಲಕ್ಷ ಟನ್ ಅಕ್ಕಿ ಸ್ಟಾಕ್ ಇದ್ದರಿಂದಲೇ ಅನುಮತಿ ನೀಡಿತ್ತು.
ಆದರೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನ್ನವನ್ನು ಕಿತ್ತುಕೊಂಡಿದ್ದಾರೆ. ಬಡವರ ಅಕ್ಕಿಯನ್ನು ಮದ್ಯದ ಪ್ರಾಡಕ್ಟ್ ಎಥೆನಾಲ್ ತಯಾರಿಸಲು ಬಳಸುತ್ತಿದ್ದಾರೆ. ಆದರೆ ಜನರಿಗೆ ನೀಡಲು ಪ್ರಧಾನಿ ಮೋದಿ, ಅಮಿತ್ ಶಾಗೆ ಮನಸ್ಸು ಬರಲಿಲ್ಲ ಮೊಯ್ಲಿ ಕಿಡಿಕಾರಿದರು.
ಶಕ್ತಿ ಯೋಜನೆಯಿಂದ ಲಾಭ: ಬಡವರ ಕೈಗೆ ಹಣ ಕೊಟ್ಟರೆ ದ್ವಿಗುಣವಾಗುತ್ತದೆ. ಆದರೆ ಶ್ರೀಮಂತರಿಗೆ ಕೊಟ್ಟರೆ ದಾಸ್ತಾನು ಆಗುತ್ತದೆ. ಇದಕ್ಕೆ ಶಕ್ತಿ ಯೋಜನೆಯೆ ಸಾಕ್ಷಿ. ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳ ಲಾಭ ಹೆಚ್ಚಾಗ್ತಿದೆ. ಇದರ ಕುರಿತು ಬೇಸಿಕ್ ಎಕನಾಮಿಕ್ಸ್ ಕೂಡ ಪ್ರಧಾನಿ ಮೋದಿಗೆ ಅರ್ಥವಾಗಲ್ಲ. ನಾವು ಕೊಟ್ಟಿರುವ ಎಲ್ಲಾ ಆಶ್ವಾಸನೆ ಈಡೇರಿಸುತ್ತೇವೆ. ಅವರಿಗೆ ಕೇವಲ ಲೂಟಿ ಮಾಡುವುದಷ್ಟೇ ಗೊತ್ತಿರುವುದು ಎಂದು ಮಾಜಿ ಸಿಎಂ ಟೀಕೆ ಮಾಡಿದರು.
ಎತ್ತಿನಹೊಳೆ ಯೋಜನೆ ಬಿಜೆಪಿ, ಜೆಡಿಎಸ್ನವರಿಗೆ ರಾಜಕೀಯ ದಾಳ: ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಯೋಜನೆಗೆ ಅಗತ್ಯ ಅನುದಾನವನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡಿ ಯೋಜನೆ ಕಾರ್ಯಗತಕ್ಕೆ ಶ್ರಮಿಸಿದೆ. ಬಿಜೆಪಿ, ಜೆಡಿಎಸ್ನವರು ಟೀಕೆ ಮಾಡುವುದರಲ್ಲೇ ಕಾಲ ಕಳೆದು, ಚುನಾವಣೆ ವೇಳೆ ರಾಜಕೀಯ ದಾಳವನ್ನಾಗಿ ಮಾಡಿಕೊಂಡಿವೆ ಎಂದು ಮೊಯ್ಲಿ ಆರೋಪಿಸಿದರು.
ಇನ್ನೂ ಎರಡು ಎಂಪಿ ಚುನಾವಣೆಗೆ ಸ್ಪರ್ಧಿಸಬಲ್ಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ವೀರಪ್ಪ ಮೊಯ್ಲಿ ಅವರು ನನ್ನಲ್ಲಿ ಇನ್ನೂ ಎರಡು ಚುನಾವಣೆ ಅಂದರೆ 10 ವರ್ಷ ಕೆಲಸ ಮಾಡುವಷ್ಟು ಮಾನಸಿಕ, ದೈಹಿಕ ಶಕ್ತಿ ಎರಡೂ ಇದೆ. ಪಕ್ಷಕ್ಕಾಗಿ ದುಡಿದ ಯಾರಿಗೆ ಟಿಕೆಟ್ ನೀಡಿದರು ಸ್ವಾಗತ ಎಂದರು. ಈ ವೇಳೆ ಮಾಜಿ ಶಾಸಕ ಟಿ. ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯ ಲಕ್ಷ್ಮಿಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: BJP protest: 'ಗ್ಯಾರಂಟಿ ಯೋಜನೆ ನೀಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ'.. ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ