ನೆಲಮಂಗಲ: ಟಾಟಾ ಸಮೂಹ ಸಂಸ್ಥೆಗೆ ಸೇರಿದ ಆಹಾರ ಉತ್ಪನ್ನಗಳ ಸಂಗ್ರಹಿಸುವ ಗೋದಾಮಿಗೆ ಬೆಂಕಿ ಬಿದ್ದಿದ್ದು, ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.
ನೆಲಮಂಗಲ ತಾಲೂಕಿನ ಹ್ಯಾಡಾಳು ಸಮೀಪದ ಟಾಟಾ ಕಂಪನಿಗೆ ಸೇರಿದ ಆಹಾರೋತ್ಪನ್ನಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕನ್ನಡಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್‌ಗೆ ಸೇರಿದ ಗೋದಾಮಿನಲ್ಲಿ ಜೆಟ್ ಲಾಜಿಸ್ಟಿಕ್ ಕಂಪನಿಯು ಟಾಟಾ ಕಂಪನಿಗೆ ಸೇರಿದ ಉಪ್ಪು, ಬೇಳೆ ಹಾಗೂ ಟೀಪುಡಿ ಉತ್ಪನ್ನಗಳನ್ನ ಸಂಗ್ರಹಿಸಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಾಕಷ್ಟು ಹಾನಿ ಉಂಟಾಗಿದೆ.
ನಿನ್ನೆ ಭಾನುವಾರ ಆದ ಕಾರಣ ಕೆಲಸಕ್ಕೆ ರಜೆ ಇತ್ತು, ಹೀಗಾಗಿ ರಾತ್ರಿ ಪಾಳಿಯಲ್ಲಿ ಯಾರು ಕೆಲಸ ಮಾಡುತ್ತಿರಲಿಲ್ಲ. ಇಂದು ಮುಂಜಾನೆ ಇನ್ನೇನು ಫಸ್ಟ್ ಶಿಫ್ಟ್ ಶುರುವಾಗಬೇಕು, ಅಷ್ಟರಲ್ಲಿ ಗೋದಾಮಿನಲ್ಲಿ ಬೆಂಕಿ ಧಗಧಗನೆ ಹೊತ್ತಿ ಉರಿಯಲು ಆರಂಭಿಸಿದೆ. ಸೆಕ್ಯುರಿಟಿಗಳು ಕೂಡಲೇ ಆಡಳಿತ ಅಧಿಕಾರಿಗಳಿಗೆ, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಅದೆಷ್ಟೇ ಹರಸಾಹಸ ಪಟ್ಟರೂ ಪ್ರಯೋಜನವಾಗದೆ ಬೆಂಕಿಯ ಜ್ವಾಲೆ ಹೆಚ್ಚಾದ ಪರಿಣಾಮ ಶುದ್ಧೀಕರಿಸಿದ ಟಾಟಾ ಉಪ್ಪು, ಪ್ಯಾಕ್ ಮಾಡುವ ಬೃಹತ್ ಯಂತ್ರ, 150 ಹೆಚ್ಚು ಬಗೆಯ ಟೀ ಪುಡಿ, ವಿಧವಿಧವಾದ ಬೇಳೆಗಳು ಹಾಗೂ ಬಹುತೇಕ ಗೋದಾಮು ಬೆಂಕಿಗೆ ಆಹುತಿಯಾಗಿದೆ.
ಅನಿಯಂತ್ರಿತ ಬೆಂಕಿಯಿಂದಾಗಿ ಇಡೀ ಗೋದಾಮು ಭಸ್ಮ ಆಗಿದ್ದು, ರಜೆ ಇದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆಗೆ ಕೈಗೊಂಡಿದ್ದಾರೆ.