ಹೊಸಕೋಟೆ : ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್ ರ್‍ಯಾಲಿಗೆ ತೆರಳಲು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜಮಾವಣೆಗೊಳ್ಳಲು ಆಗಮಿಸಿದ್ದ ರೈತರನ್ನು ಹೊಸಕೋಟೆಯಲ್ಲೇ ತಡೆಯಲು ಪೊಲೀಸರು ಇಲ್ಲಿನ ಟೋಲ್ ಬಳಿ ಟ್ರಾಕ್ಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲಿ ಕಾಣಿಸುವ ರೈತರ ಹಾಗೂ ಕಾರ್ಮಿಕರ ಟ್ರಾಕ್ಟರ್ಗಳನ್ನು ವಶಕ್ಕೆ ಪಡೆದಿದ್ದು, ಮಾಲೀಕರು ಎಷ್ಟೇ ಕೇಳಿಕೊಂಡರೂ ಬಿಡದೆ ವಾಪಸ್ ಕಳಿಸುತ್ತಿದ್ದಾರೆ. ತೋಟದಲ್ಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ರೈತರ ಟ್ರ್ಯಾಕ್ಟರ್ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರ್‍ಯಾಲಿಯಲ್ಲಿ ನಾವು ಭಾಗವಹಿಸಲ್ಲ, ನಮ್ಮ ಟ್ರ್ಯಾಕ್ಟರ್ಗಳನ್ನು ಮನೆಯತ್ತ ತೆಗೆದುಕೊಂಡು ಹೋಗಲು ಬಿಡಿ ಎಂದು ರೈತರು ಗೋಗರೆದರೂ ಪೊಲೀಸರು ಟ್ರ್ಯಾಕ್ಟರ್ ಮಾಲೀಕರ ವಿಳಾಸ ಪಡೆದು ಮನೆಗೆ ಕಳುಹಿಸಿದ್ದಾರೆ.
ಕೋಲಾರ ಜಿಲ್ಲೆಯಿಂದ ಬರುವ ಟ್ರ್ಯಾಕ್ಟರ್ ಮತ್ತು ರೈತರನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೋಲ್ ಬಳಿ ಪೊಲೀಸರು ಅಲರ್ಟ್ ಆಗಿದ್ದಾರೆ. ಟೋಲ್ ಬಳಿ ಹೊಸಕೋಟೆ ಠಾಣೆ, ಆವಲಹಳ್ಳಿ ಠಾಣೆ, ಕೆ.ಆರ್.ಪುರ ಠಾಣೆಯ ಪೊಲೀಸರು ಸಂಜೆಯಿಂದಲೇ ಎಲ್ಲಾ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.
ನಗರದ ಹೊರವಲಯದಿಂದ ಬರುವ ವಾಹನಗಳನ್ನು ತಡೆಯಲು ಹೊಸಕೋಟೆ ಟೋಲ್, ಕಾಟಂ ನಲ್ಲೂರು ಗೇಟ್, ಮೇಡಹಳ್ಳಿ, ಕಿತ್ತಗನೂರು ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.