ಬೆಂಗಳೂರು: ರಾಜ್ಯ ಸರ್ಕಾರದ ಭೂ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ತಾಲೂಕಿನ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ, ಪ್ರವಾಸಿ ಮಂದಿರದಿಂದ ಹೆದ್ದಾರಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಹೆದ್ದಾರಿ ತಡೆಯಲು ಹೊರಟಿದ್ದಾರೆ. ಬೆಂಗಳೂರು - ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ 7ರನ್ನ ತಡೆದು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದು, ಹೆದ್ದಾರಿ ತಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ದೇವನಹಳ್ಳಿ ಬಳಿಯ ಕೆಂಪೇಗೌಡ ಸರ್ಕಲ್ಗೆ ಇನ್ನು ರೈತರು ಬಂದಿಲ್ಲ. ಹತ್ತು ಗಂಟೆಗೆ ಹೇಳಿದ್ದು, ಹನ್ನೊಂದು ಗಂಟೆಯಾದರೂ ಇನ್ನು ರೈತರು ಬಂದಿಲ್ಲ.ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಯಥಾಸ್ಥಿತಿಯಲ್ಲಿದೆ.
ವಾಹನ ಸವಾರರಿಗೆ ಅಡಚಣೆಯಾಗದಂತೆ ನೋಡಿಕೊಳ್ಳಲು ಪೊಲೀಸರ ಆಗಮಿಸಿದ್ದು,ರೈತರನ್ನು ತಡೆಯಲು ವಾಟರ್ ಜೇಟ್ ವಾಹನದೊಂದಿಗೆ ಕೆಂಪೇಗೌಡ ಸರ್ಕಲ್ಗೆ ಪೊಲೀಸರು ಆಗಮಿಸಿದ್ದಾರೆ. ರೈತರ ಪ್ರತಿಭಟನೆ ಅತಿರೇಕಕ್ಕೆ ಹೋದ್ರೆ ವಾಟರ್ ಬಳಸಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಡಿಸಿಪಿ ಕಲಾ ಕೃಷ್ಣ ಸ್ವಾಮಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.