ದೇವನಹಳ್ಳಿ: ಪ್ರಸ್ತುತ ಭಾರತ ಸರ್ಕಾರ ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಕಾಯ್ದೆ ಉದ್ಯಮಿಗಳ ಪರವಾಗಿದ್ದು, ರೈತರ ಪಾಲಿಗೆ ಶಾಪವಾಗಲಿದೆ. ಕೃಷಿ ಮಾರುಕಟ್ಟೆಯನ್ನು ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಮಾಡಿಕೊಡಲು ಹೊರಟಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿತು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಸನ್ನ, ಎಲ್ಲಾ ರೈತಪರ ನೀತಿಗಳನ್ನು ಗಾಳಿಗೆ ತೂರಿ ಸಂವಿಧಾನ ವಿರೋಧಿಯಾದ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರದ ಹಿಡಿತದಲ್ಲಿರುವ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯಪಾಲರ ಮೂಲಕ ಸುಗ್ರೀವಾಜ್ಞೆ ಜಾರಿ ಮಾಡುವ ಹುನ್ನಾರದಲ್ಲಿದೆ. ಒಂದು ಶತಮಾನ ಹಳೆಯದಾದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸುಧಾರಿಸಿ ದೇಶ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸಿ ಕೃಷಿಕನಿಗೆ ಸ್ಪರ್ಧಾತ್ಮಕವಾದ ಬೆಲೆ ಕೊಡಿಸಲು ಸರ್ಕಾರಗಳು ಯೋಜನೆ ರೂಪಿಸಬೇಕಿತ್ತು. ಬದಲಿಗೆ ಅಂತಾರಾಷ್ಟ್ರೀಯ ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ತುದಿಗಾಲಲ್ಲಿ ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.