ದೊಡ್ಡಬಳ್ಳಾಪುರ : ಲಾಕ್‌ಡೌನ್ ವೇಳೆ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಕಡಿತ ಮಾಡಿದ್ದ 4 ರೂಪಾಯಿಗಳನ್ನ ರೈತರ ಖಾತೆಗೆ ಜಮಾ ಮಾಡಬೇಕು. ರೈತರಿಂದ ಖರೀದಿಸುವ ಹಾಲಿನ ಬೆಲೆ ಹೆಚ್ಚು ಮಾಡಬೇಕು. ಇಲ್ಲದಿದ್ರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೆಎಂಎಫ್ ನಿರ್ದೇಶಕ ಬಿ ಸಿ ಆನಂದ್‌ಕುಮಾರ್ ಎಚ್ಚರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಬೆಸೆಂಟ್ ಪಾರ್ಕ್‌ನಲ್ಲಿ ನಡೆದ ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಸಂದರ್ಭದಲ್ಲೂ ಸಹ ರೈತರು, ಸಹಕಾರ ಸಂಘದ ಹಾಗೂ ಒಕ್ಕೂಟದ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಆದರೆ, ರೈತರಿಂದ ಖರೀದಿಸುವ ಹಾಲಿಗೆ ಮಾತ್ರ ಬೆಲೆ ಕಡಿತ ಮಾಡಲಾಗಿದೆ.
ರೈತರು ಪ್ರಶ್ನೆ ಮಾಡಿಲ್ಲ ಅಂದ ಮಾತ್ರಕ್ಕೆ ಇದು ರೈತರ ಅಸಹಾಯಕತೆ ಎಂದು ಭಾವಿಸದೆ ಈಗ ಬೆಲೆ ಹೆಚ್ಚು ಮಾಡಬೇಕು. ಒಕ್ಕೂಟದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಬಳ ಮಾತ್ರ ಕಡಿಮೆಯಾಗಿಲ್ಲ. ಆದರೆ, ರೈತರ ಹಾಲಿನ ಬೆಲೆ ಏಕೆ ಕಡಿತ ಮಾಡಬೇಕು ಎಂದು ಪ್ರಶ್ನಿಸಿದರು.
ಸದ್ಯಕ್ಕೆ 8 ಸಾವಿರ ಟನ್ ಹಾಲಿನ ಪುಡಿ ದಾಸ್ತಾನು ಇದೆ. ಇದರಿಂದ ರಾಜ್ಯದ ಎಲ್ಲಾ ಮಹಾ ಮಂಡಲಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ರೈತರ ಮೇಲೆ ಬೀರಲಿದೆ. ಗ್ರಾಮೀಣ ಭಾಗದ ಜನರ ಆರ್ಥಿಕ ಶಕ್ತಿಯಾಗಿರುವ ಹೈನುಗಾರಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳ ನೆರವಿಗೆ ಬಂದಂತೆ ಈಗಲು ಸಹ ಮುಖ್ಯಮಂತ್ರಿಗಳು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾದ ಕ್ಷೀರಭಾಗ್ಯ ಯೋಜನೆಯಿಂದ ರೈತರ ಹಾಲಿಗೆ ಬೇಡಿಕೆ ಹೆಚ್ಚಾಗಿತ್ತು. ಅಲ್ಲದೆ ಪ್ರತಿ ಲೀಟರ್ ಹಾಲಿಗೆ 3 ರೂ. ಪ್ರೋತ್ಸಾಹವನ್ನು ನೀಡಿದ್ದರು ಎಂದರು.
ಈ ಬಾರಿ ತಾಲೂಕಿನಲ್ಲಿ ರಾಗಿ ಇಳುವರಿ ಉತ್ತಮವಾಗಿದೆ. ಇದರಿಂದಾಗಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಒಂದು ಎಕರೆಗೆ ಇಂತಷ್ಟೇ ಚೀಲ ರಾಗಿ ಖರೀದಿ ಮಾಡಬೇಕು ಎನ್ನುವ ಮಿತಿ ಹಾಕಿರುವುದು ಸರಿಯಲ್ಲ ಎಂದರು.
ತಾಲೂಕಿನಲ್ಲಿ ರೈತರು ಸರಬರಾಜು ಮಾಡುವ ಹಾಲಿಗೆ ಪ್ರತಿ ತಿಂಗಳು 11 ಕೋಟಿ ರೂ. ಖರೀದಿ ಹಣ ಹಾಗೂ ಸಹಾಯ ಧನವಾಗಿ 2 ಕೋಟಿ ರೂ.ಬರುತ್ತಿದೆ. ಈ ಹಿನ್ನೆಲೆ ಹಾಲಿನ ಟೆಟ್ರಾಪ್ಯಾಕ್ ಹಾಗೂ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆಗೆ ಭೂಮಿ ನೀಡಲಾಗುವುದು, ಕೆಎಂಎಫ್ ವತಿಯಿಂದ ಎರಡೂ ಘಟಕಗಳ ಸ್ಥಾಪನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ನಿಧನರಾದ ತಾಲೂಕಿನ ಬಮೂಲ್ ಮಾಜಿ ನಿರ್ದೇಶಕ ಎನ್.ಹನುಮಂತೇಗೌಡ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೂ ಕೆಎಂಎಫ್ಗೆ ಲಾಭ... ರೈತರಿಗೆ ಸಿಗಲಿದೆ ಬೋನಸ್