ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಅವರ 11ನೇ ದಿನದ ಉತ್ತರ ಕ್ರಿಯೆ ಕಾರ್ಯಕ್ಕೆ ಬರುವಂತೆ ದರ್ಶನ್ ಅಭಿಮಾನಿಗಳ ಸಂಘವು ಚಾಲೆಂಜಿಂಗ್ ಸ್ಟಾರ್ಗೆ ಮನವಿ ಮಾಡಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ರಾಂಪುರ ಗ್ರಾಮದ ಪ್ರಜ್ವಲ್ (30) ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕನಾಗಿದ್ದ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಪ್ರಜ್ವಲ್, ತಮ್ಮ ಬಲಗೈ ಮೇಲೆ ದರ್ಶನ್ ಅವರ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದ. ಈ ಹಿಂದೊಮ್ಮೆ ಮೈಸೂರಿನ ಫಾರ್ಮ್ ಹೌಸ್ನಲ್ಲಿ ದರ್ಶನ್ ಅವರನ್ನು ಭೇಟಿ ಸಹ ಮಾಡಿದ್ದ.
ಆಗಸ್ಟ್ 31ರಂದು ಪ್ರಜ್ವಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ ಕುಳಿತ ಜಾಗದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಆಗ ಇತರ ಅಭಿಮಾನಿಗಳು ಈ ವಿವಾರವನ್ನು ದರ್ಶನ್ಗೆ ತಿಳಿಸಲು ಪ್ರಯತ್ನಿಸಿದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಪ್ರಜ್ವಲ್ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿತ್ತು.
ಇದೀಗ ಸೆಪ್ಟೆಂಬರ್ 10ರಂದು ರಾಂಪುರ ಗ್ರಾಮದಲ್ಲಿ ಪ್ರಜ್ವಲ್ 11ನೇ ದಿನದ ಉತ್ತರ ಕ್ರಿಯೆ ಕಾರ್ಯಕ್ಕೆ ದರ್ಶನ್ ಬರುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಅಭಿಮಾನಿಗಳ ಸಂಘದವರು ಕರಪತ್ರ ಹೊರಡಿಸಿದ್ದು, ಅದು ತಮ್ಮ ನೆಚ್ಚಿನ ನಟನಿಗೆ ತಲುಪಿ ಕ್ರಿಯಾ ಕಾರ್ಯಕ್ಕೆ ದರ್ಶನ್ ಬರುವ ವಿಶ್ವಾಸ ಅಭಿಮಾನಿಗಳದ್ದಾಗಿದೆ.
ಮೃತ ಪ್ರಜ್ವಲ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಹೆಂಡತಿ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ತಮಗೆ ಆಧಾರವಾಗಿದ್ದ ಪ್ರಜ್ವಲ್ರನ್ನು ಕಳೆದುಕೊಂಡ ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.
ಇದನ್ನೂ ಓದಿ: Tokyo Paralympic: Badminton ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಕೃಷ್ಣ ನಗರ್