ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ನಕಲಿ ಪೊಲೀಸರು ದಾಳಿ ಮಾಡಿದ್ದು 1 ಲಕ್ಷ 80 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕೋನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯುವಕರ ಗುಂಪು ಕೋನಘಟ್ಟ ಗ್ರಾಮದ ಹೊರವಲಯದಲ್ಲಿ ಜೂಜಾಟ ಆಡುತ್ತಿತ್ತು. ಇದರ ಮಾಹಿತಿ ತಿಳಿದ ನಾಲ್ವರು ಅನಾಮಿಕರು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ನಾವು ಪೊಲೀಸರು, ಯಾರಾದರೂ ಓಡಿಹೋಗಲು ಯತ್ನ ಮಾಡಿದರೆ ಪ್ರಕರಣ ದಾಖಲಿಸುತ್ತೇವೆ. ಯಾರೂ ಓಡಿ ಹೋಗಬೇಡಿ ಎಂದು ಸಮಾಧಾನ ಮಾಡಿದ್ದಾರೆ. ಬಳಿಕ ರಾಜಿಸಂಧಾನ ಮಾಡಿಕೊಂಡು ಜೂಜಾಟದಲ್ಲಿದ್ದವರಿಂದ ಹಣ ದೋಚಿದ್ದಾರೆ.
ನಕಲಿ ಪೊಲೀಸರ ಬಗ್ಗೆ ಅನುಮಾನಗೊಂಡ ಗ್ರಾಮಸ್ಥನೋರ್ವ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ನಾಲ್ವರು ನಕಲಿ ಪೊಲೀಸರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜೂಜಾಟ ಆಡುತ್ತಿದ್ದಾಗಲೇ ಸಿಕ್ಕಿಬಿದ್ದ ಸಿಬ್ಬಂದಿ.. ನಾಲ್ವರು ಪೊಲೀಸರು ಅಮಾನತು