ಆನೇಕಲ್ : ಕೊರೊನಾ ಮಹಾಮಾರಿ ಹೇಗೆಲ್ಲಾ ಹರಡುತ್ತದೆ, ಸತ್ತ ಮನುಷ್ಯನಲ್ಲೂ ಕೊರೊನಾ ಸೋಂಕು ಇರುತ್ತದೆಯೇ ಎನ್ನುವ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು. ಈ ನಡುವೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡುವ ಮೂಲಕ ಸತ್ತ 18 ಗಂಟೆಗಳ ಬಳಿಕವೂ ಶವದಲ್ಲಿ ವೈರಸ್ ಜೀವಂತವಾಗಿ ಇರುತ್ತದೆ ಎನ್ನುವಂತಹ ಅಚ್ಚರಿಯ ಸಂಗತಿ ಹೊರ ಬಿದ್ದಿದೆ.
ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಅವರು ಈ ಸಾಹಸಕ್ಕೆ ಕೈ ಹಾಕಿ ಕೊರೊನಾ ಸ್ಫೋಟಕ ಅಂಶಗಳನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 62 ವರ್ಷದ ವ್ಯಕ್ತಿ ಕಳೆದ 10 ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿ ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆ ವ್ಯಕ್ತಿ ಮೃತಪಟ್ಟಿದ್ದರು. ಆಗ ಡಾ. ದಿನೇಶ್, ಕುಟುಂಬದವರ ಒಪ್ಪಿಗೆಯ ಮೇರೆಗೆ ಕೊರೊನಾ ಸೋಂಕಿತನ ಶವ ಪರೀಕ್ಷೆ ಮಾಡುವ ಮೂಲಕ ಸ್ಫೋಟಕ ಅಂಶಗಳನ್ನ ಸಾರ್ವಜನಿಕರಿಗೆ ತಿಳಿಯ ಪಡಿಸಿದ್ದಾರೆ.
ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂಗಾಂಗಗಳು ಸಂಪೂರ್ಣ ಹಾನಿಗೆ ಒಳಗಾಗಿತ್ತು. ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿಯ ಶ್ವಾಸಕೋಶ ಮೃದುವಾಗಿರುತ್ತದೆ. ಆದ್ರೆ ಕೊರೊನಾ ಮಹಾಮಾರಿಗೆ ತುತ್ತಾಗಿ ಮೃತಪಟ್ಟ ಸೋಂಕಿತನ ಶ್ವಾಸಕೋಶ ಕಾರ್ಕ್ ಬಾಲ್ನಷ್ಟು ಗಟ್ಟಿಯಾಗಿ ಹೋಗಿದೆ. ಜೊತೆಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ, ಹೃದಯ, ಲಿವರ್, ಶ್ವಾಸನಾಳಗಳು ಸಂಪೂರ್ಣ ಹದಗೆಟ್ಟಿರುವುದನ್ನ ಇವರು ಗಮನಿಸಿದ್ದಾರೆ.
ಶ್ವಾಸಕೋಶದ ಗಾಳಿಯ ರಂಧ್ರಗಳು ಸ್ಫೋಟಗೊಂಡು ರಕ್ತ ಹೆಪ್ಪುಗಟ್ಟುತ್ತದೆ. ವಿಚಿತ್ರವೆಂದರೆ ಕೆಲವೊಮ್ಮೆ ಶ್ವಾಸಕೋಶದಲ್ಲಿ ಕೊರೊನಾ ವೈರಸ್ ಪತ್ತೆಯಾಗುವುದಿಲ್ಲ. ವ್ಯಕ್ತಿ ಸತ್ತ ಬಳಿಕವೂ 18 ಗಂಟೆಗಳ ಕಾಲ ದೇಹದಲ್ಲಿ ವೈರಸ್ ಜೀವಂತವಾಗಿ ಇರುತ್ತದೆ ಎಂಬ ಅಂಶವನ್ನು ಅಲ್ಲಗಳೆಯುಂತಿಲ್ಲ ಎಂದಿದ್ದಾರೆ ಡಾ ದಿನೇಶ್.
ಈ ಒಂದೇ ಶವ ಪರೀಕ್ಷೆಯಲ್ಲಿ ಇದು ಖಚಿತ ಎಂದು ಹೇಳುವುದಕ್ಕಿಂತ ಇದೇ ರೀತಿ ಮೃತಪಟ್ಟ ಬೇರೆ ಬೇರೆ ವಯೋಮಾನದ ಕೋವಿಡ್ನಿಂದ ಮೃತಪಟ್ಟವರ ಶವ ಪರೀಕ್ಷೆ ನಡೆಸಿ ಸಂಶೋಧನೆ ನಡೆಸಿದಾಗ ಮತ್ತಷ್ಟು ಅಂಶಗಳು ಕೊರೊನಾ ಬಗ್ಗೆ ಬೆಳಕಿಗೆ ಬರುತ್ತದೆ. ಹಾಗಾಗಿ ಕೊರೊನಾ ಬಗ್ಗೆ ಜನಸಾಮಾನ್ಯರು ನಿರ್ಲಕ್ಷ್ಯ ವಹಿಸುವುದು ಬೇಡ ಎನ್ನುತ್ತಾರೆ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್.