ನೆಲಮಂಗಲ: ನೆಲಮಂಗಲದ ಪಾಳು ಬಿದ್ದ ಬಾವಿಯಲ್ಲಿ ಭಯಾನಕ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಸ್ಫೋಟದ ತೀವ್ರತೆಗೆ ಬಾವಿಯ ಮೇಲಿನ ಚಪ್ಪಡಿ ಕಲ್ಲು ಮತ್ತು ತಡೆಗೋಡೆ ಛಿದ್ರವಾಗಿದೆ. ಓರ್ವ ಬಾಲಕಿ ಮತ್ತು ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಗಾಯಾಳು ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಭಾಷ್ ನಗರದ ಗುಬ್ಬಿ ಸ್ವಾಮಿ ಅವರ ಮನೆಯ ಹಿಂಭಾಗದಲ್ಲಿನ ಪಾಳುಬಾವಿಯಲ್ಲಿಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೆ ಮನೆಯ ಬಳಿ ಬಂದಿದ್ದ ಬುಡುಬುಡಿಕೆಯೊಬ್ಬ 'ಮನೆಯ ಹಿಂಭಾಗದಲ್ಲಿ ಚಪ್ಪಡಿ ಮುಚ್ಚಿದ ಪಾಳು ಬಾವಿಯಲ್ಲಿ ಮಾಟ ಮಾಡಿಸಿದ್ದಾರೆ. ಇನ್ನೆರಡು ದಿನದಲ್ಲಿ ಕುಟುಂಬಕ್ಕೆ ಗಂಡಾಂತರ ಕಾದಿದೆ' ಎಂದು ಭವಿಷ್ಯ ನುಡಿದಿದ್ದ ಎನ್ನಲಾಗುತ್ತಿದೆ.
ಆತನ ಮಾತು ಕೇಳಿ ಭಯಗೊಂಡ ಗುಬ್ಬಿ ಸ್ವಾಮಿ ಮಗ ಶಂಕರ್, ಪೆಟ್ರೋಲ್ ನೆನೆಸಿದ ಗೋಣಿ ಚೀಲಕ್ಕೆ ಬೆಂಕಿ ಹಚ್ಚಿ ಬಾವಿ ಒಳಗೆ ಹಾಕಿದ್ದಾರೆ. ಬಾವಿಯಲ್ಲಿ ವೆಸ್ಟ್ ಆಯಿಲ್ನ ಡಬ್ಬಗಳು ತುಂಬಿದ್ದವು. ಅವುಗಳಿಗೆ ಬೆಂಕಿ ತಗುಲಿದೆ. ಗಾಳಿಯಾಡದಂತೆ ಮುಚ್ಚಿದ್ದ ಬಾವಿ ಬೆಂಕಿಯ ಕೆನ್ನಾಲಿಗೆಗೆ ಭಾರಿ ಶಬ್ಬದೊಂದಿಗೆ ಸ್ಫೋಟ ಗೊಂಡಿದೆ.
ಸ್ಫೋಟದಿಂದಾಗಿ ಶಂಕರ್ ಮುಖಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.