ಬೆಂಗಳೂರು: ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಪಡಿಸಿ ಸಿಇಟಿ ರ್‍ಯಾಂಕಿಂಗ್ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕೋವಿಡ್ ಕಾರಣ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) ನಿಯಮದಂತೆ, ರಾಜ್ಯದಲ್ಲಿ ಕೃಷಿ ಪದವಿಯ ದಾಖಲಾತಿಗೆ ಪರೀಕ್ಷೆಯ ಬದಲಾಗಿ ಸಿಇಟಿ ರ್‍ಯಾಂಕಿಂಗ್ ಆಧಾರದ ಮೇಲೆ ಕೃಷಿಕರ ಮಕ್ಕಳು ಹಾಗೂ ಕೃಷಿ ಕಾರ್ಮಿಕರ ಕೋಟಾದಡಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಆರೋಗ್ಯ ಹಾಗೂ ಹಿತರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಸ್ವತಃ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸುವುದು ಕಷ್ಟಸಾಧ್ಯ.ಆದ್ದರಿಂದ ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೃಷಿಕರ ಕೋಟಾದ ಅಡಿಯಲ್ಲಿ ಶೇ.40 ಸೀಟುಗಳು ಕೃಷಿಕರ ಮಕ್ಕಳಿಗೇ ಮೀಸಲಿರುವುದರಿಂದ ನೈಜ ಕೃಷಿಕರ ಮಕ್ಕಳು ಮಾತ್ರ ಕೃಷಿಕರ ಕೊಟಾದಲ್ಲಿ ಸೀಟುಗಳನ್ನು ಪಡೆದುಕೊಳ್ಳುವಂತೆ ಮಾಡಲು ಸರ್ವ ನಿಬಂಧನೆಗಳನ್ನು ಸಿದ್ಧಪಡಿಸಲಾಗಿದೆ.ಇದರಿಂದ ಕೃಷಿಕರ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಸಚಿವರು ಖಾತ್ರಿಪಡಿಸಿದ್ದಾರೆ.