ಆನೇಕಲ್(ಬೆಂಗಳೂರು) : ಕಳೆದ ಮೂರು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯ ಕಲ್ಲುಕ್ವಾರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಉಳಿದಿಬ್ಬರು ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಯುವಕನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಮೂಲದ ಸಾಗರ್(25) ಎಂದು ಗುರುತಿಸಲಾಗಿದೆ. ಮೃತ ಯುವಕ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ರೂಪಾ ಎಂಬಾಕೆಯನ್ನು ಆಗಾಗ್ಗೆ ಲೈಂಗಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದನಂತೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಕೊಲೆಯಾದ ಸಾಗರ್, ಬೊಮ್ಮಸಂದ್ರ ಕೈಗಾರಿಕಾ ವಲಯದ ಕಂಪನಿಯಲ್ಲಿ ಕಾರ್ಮಿಕನಾಗಿದ್ದು, ಹೆಬ್ಬಗೋಡಿಯಲ್ಲಿ ವಾಸವಿದ್ದ. ಆತನ ಮನೆ ಪಕ್ಕದಲ್ಲಿಯೇ ರೂಪಾ ಕುಟುಂಬ ವಾಸವಾಗಿತ್ತು. ಮಹಿಳೆ ಹೆಬ್ಬಗೋಡಿಯ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ಆಕೆಯ ಪತಿ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಲ್ಲದೆ ರೂಪಾ ಆಸ್ಪತ್ರೆ ಖರ್ಚಿಗಾಗಿ ಸಾಗರ್ನಿಂದ 20 ಸಾವಿರ ರೂ.ಗಳನ್ನು ಪಡೆದಿದ್ದಳಂತೆ.
ಇದನ್ನೇ ನೆಪ ಮಾಡಿಕೊಂಡು ಸಾಗರ್, ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತ ಪತಿ ಮಾನಸಿಕ ರೋಗದಿಂದ ಬಳಲುತ್ತಿದ್ದರಿಂದ ರೂಪಾ ನಿರಾಕರಿಸದೆ ಅನಿವಾರ್ಯವಾಗಿ ಒಪ್ಪಿದ್ದಳು. ನಮ್ಮಿಬ್ಬರ ರಾಸಲೀಲೆ ವಿಡಿಯೋ ಇದೆ.
ಕರೆದಾಗ ಬರುವಂತೆ ಸಾಗರ್ ಪದೇಪದೆ ಮಹಿಳೆಯನ್ನು ಪೀಡಿಸುತ್ತಿದ್ದನಂತೆ. ಇದರಿಂದ ಮನನೊಂದ ರೂಪಾ, ತನ್ನ ಮಗನ ಸ್ನೇಹಿತ ಚಿತ್ರದುರ್ಗ ಮೂಲದ ಟಾಟಾ ಏಸ್ ಚಾಲಕ ತಿಮ್ಮೇಶ್ನಿಗೆ ವಿಷಯ ತಿಳಿಸಿದ್ದಳು.
ಕಾಲ ಕಳೆದಂತೆ ರೂಪಾ-ಸಾಗರ್ ಒತ್ತಾಸೆಯನ್ನು ತಳ್ಳಿ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಸಾಗರ್, ಕುಡಿದು ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಇದರಿಂದ ಬೇಸತ್ತ ರೂಪಾ ಹೇಗಾದರೂ ಮಾಡಿ ಸಾಗರ್ಗೆ ಬುದ್ಧಿ ಕಲಿಸುವಂತೆ ತಿಮ್ಮೇಶ್ಗೆ ಹೇಳಿದ್ದಾಳೆ.
ಇದನ್ನೂ ಓದಿ: ಚೀಟಿ ಹೆಸರಲ್ಲಿ ಅಣ್ಣ-ತಮ್ಮರಿಂದ ಕೋಟ್ಯಂತರ ರೂಪಾಯಿ ದೋಖಾ!?
ಆಗ ತಿಮ್ಮೇಶ್ ತನ್ನ ಜೊತೆಗೆ ಅಪ್ರಾಪ್ತರಿಬ್ಬರನ್ನು ಕರೆಸಿಕೊಂಡು ಸಾಗರ್ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಪ್ಲಾನ್ನಂತೆ ರೂಪಾನಿಂದ ಸಾಗರ್ಗೆ ಫೋನ್ ಮಾಡಿಸಿ ಹುಲಿಮಂಗಲ ಸಮೀಪದ ಕಲ್ಲು ಕ್ವಾರಿಗೆ ಕರೆಸಿಕೊಂಡು ಆತನ ಮೇಲೆ ತಿಮ್ಮೇಶ್ ಅಂಡ್ ಗ್ಯಾಂಗ್ ನೀಲಗಿರಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ಬಳಿಕ ಮೃತ ಯುವಕನ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಪರಾರಿಯಾಗಿದ್ದಾರೆ.
ಇತ್ತ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು, ಮೊದಲು ಮೃತ ಸಾಗರ್ನ ಮೊಬೈಲ್ ಕಾಲ್ ಡಿಟೈಲ್ಸ್ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದರು. ಇದರ ಆಧಾರದ ಮೇಲೆ ಆರೋಪಿ ರೂಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ