ದೇವನಹಳ್ಳಿ: ವಿದ್ಯಾವಂತರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ನಂಬಿ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 9 ಪದವಿಗಳೊಂದಿಗೆ ಡಾಕ್ಟರೇಟ್ ಪದವಿ ಪಡೆದಿರುವ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ದೇವನಹಳ್ಳಿ ತಾಲೂಕಿನ ಟಿ. ಅಗ್ರಹಾರ ನಿವಾಸಿ ಡಾ. ದೇವನಹಳ್ಳಿ ದೇವರಾಜ್, ಚನ್ನಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮ್ಮ ಗ್ರಾಮದಿಂದ ಸ್ಪರ್ಧಿಸಿರುವ ಡಾ. ದೇವರಾಜ್ ಒಟ್ಟು 9 ಪದವಿ ಪಡೆದಿದ್ದಾರೆ. ಹಾಗೆಯೇ ಇದರ ಜೊತೆಗೆ ಡಾಕ್ಟರೇಟ್ ಪದವಿ ಸಹ ಪಡೆದಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 9 ಪದವಿ ಪಡೆದವ ಸ್ಪರ್ಧೆಗೆ ಇಳಿದಿರುವುದು ಇವರೊಬ್ಬರೇ ಎನ್ನಬಹುದು.
ಡಾ. ದೇವನಹಳ್ಳಿ ದೇವರಾಜ್ M.A., M.PHIL. (Eco), M.L.I.Sc., M.PHIL. (LIB & INF.Sc.) DIP.IN N.S.S.,M.A., S.L.E.T., D.F.A., PH.D.(Drama & Cinema)ದಲ್ಲಿ ಪದವಿ ಪಡೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿಸುತ್ತಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರಾಜಕೀಯ ಮುಖಂಡರ ಒತ್ತಾಯಕ್ಕೆ ಮಣಿದು ನಾಮಪತ್ರ ಹಿಂತೆಗೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಯಾರ ಮಾತಿಗೂ ಮಣಿಯದೆ ಸ್ಪರ್ಧೆಗೆ ಇಳಿದಿದ್ದಾರೆ.
ವಿದ್ಯಾವಂತರು ರಾಜಕೀಯಕ್ಕೆ ಬರುವುದು ರಾಜಕೀಯ ಮುಖಂಡರಿಗೆ ಇಷ್ಟ ಇರುವುದಿಲ್ಲ. ವಿದ್ಯಾವಂತರು ಜನರೊಂದಿಗೆ ನೇರ ಸಂಪರ್ಕ ಸಾಧಿಸುತ್ತಾರೆಂಬ ಕಾರಣಕ್ಕೆ ವಿದ್ಯಾವಂತರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾರೆ ದೇವರಾಜ್.
ಆದರೆ ಈ ಬಾರಿ ಮುಖಂಡರ ಮಾತಿಗೆ ಮಣೆ ಹಾಕದೆ ಗ್ರಾಮದ ಅಭಿವೃದ್ಧಿಗಾಗಿ ಕುಕ್ಕರ್ ಚಿಹ್ನೆಯ ಗುರುತಿನೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಗ್ರಾಮವನ್ನು ಸಂಪೂರ್ಣ ವಿಮಾ ಗ್ರಾಮವನ್ನಾಗಿ ಮಾಡುವ ಭರವಸೆಯೊಂದಿಗೆ ಹಲವು ಅಶ್ವಾಸನೆಗಳನ್ನು ದೇವರಾಜ್ ಮತದಾರರಿಗೆ ನೀಡಿದ್ದಾರೆ.
ಡಾ. ದೇವನಹಳ್ಳಿ ದೇವರಾಜ್ ಸಿನಿಮಾ ಮತ್ತು ಕಿರುತೆರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಪರಿವರ್ತನಾ ಕಲಾ ತಂಡ ಕಟ್ಟಿರುವ ಇವರು, ಈ ಸ್ವಯಂ ಸೇವಾ ಸಂಸ್ಥೆಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಓದಿ...ನ್ಯೂ ಇಯರ್ ಪಾರ್ಟಿ ಇರಲ್ಲ: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ