ದೊಡ್ಡಬಳ್ಳಾಪುರ: ಜಿಲ್ಲೆಯ ದೊಡ್ಡ ಬೆಳವಂಗಲ ಎಂಬಲ್ಲಿ ಇತ್ತೀಚೆಗೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದಾಗ ವಾಹನ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಇಬ್ಬರು ಯುವಕ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಇಂದು ಮುಂಜಾನೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೋಡಿ ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಇತ್ತೀಚೆಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಫೆಬ್ರವರಿ 17 ರಂದು ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಅಯೋಜನೆ ಮಾಡಲಾಗಿತ್ತು. ಮೈದಾನದಲ್ಲಿ ಗಾಡಿ ಪಾರ್ಕಿಂಗ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಇದನ್ನೇ ನೆಪವಾಗಿಟ್ಟುಕೊಂಡ ಆರೋಪಿಗಳು ಭರತ್ ಮತ್ತು ಪ್ರತೀಕ್ ಎಂಬವರ ಹೊಟ್ಟೆ ಭಾಗ ಮತ್ತು ಗುಪ್ತಾಂಗಕ್ಕೆ ಚಾಕು ಇರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಗ್ರಾಮಸ್ಥರಿಂದ ಪ್ರತಿಭಟನೆ: ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಮೊದಲು ದೊಡ್ಡಬಳ್ಳಾಪುರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿರಲಿಲ್ಲ. ನಿನ್ನೆಯಷ್ಟೇ ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಮೃತ ಯುವಕರ ಕುಟುಂಬಗಳಿಗೆ ಸಂತ್ವಾನ ಹೇಳಲು ಬಂದಿದ್ದ ಸಚಿವ ಎಂ.ಟಿ.ಬಿ ನಾಗರಾಜ್ಗೆ ಮುತ್ತಿಗೆ ಹಾಕಿದ್ದರು.
ಇದನ್ನೂ ಓದಿ:ನಿಕ್ಕಿ ಯಾದವ್ ಹತ್ಯೆಗೆ ಬಿಗ್ ಟ್ವಿಸ್ಟ್: ಲಿವ್ ಇನ್ ಅಲ್ಲ, ವಿವಾಹಿತ ದಂಪತಿ.. ತಂದೆಗೆ ಗೊತ್ತಿತ್ತು ಮಗನ ಕೃತ್ಯ!
ಪರಿಸ್ಥಿತಿಯ ಗಂಭೀರತೆ ಮತ್ತು ಸೂಕ್ಷ್ಮತೆ ಅರಿತ ಸಚಿವರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದೇ ವೇಳೆ ಗ್ರಾಮಸ್ಥರಿಗೆ ಭರವಸೆ ನೀಡಿದ ಡಿವೈಎಸ್ಪಿ ನಾಗರಾಜ್, ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸುವುದಾಗಿ ಹೇಳಿದ್ದರು. ಡಿವೈಎಸ್ಪಿ ಮಾತಿನಂತೆ ಇಂದು ಮುಂಜಾನೆ ನಡೆದ ಶೂಟೌಟ್ನಲ್ಲಿ ಆರೋಪಿಗಳಾದ ತ್ರಿಮೂರ್ತಿ ಮತ್ತು ವಿನಯ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ದೊಡ್ಡಬಳ್ಳಾಪುರ ನಗರದ ಪಿಎಸ್‌ಐ ಜಗದೀಶ್, ವೃತ್ತದ ಬಳಿ ಆರೋಪಿಗಳ ಸುಳಿವು ಸಿಕ್ಕ ಹಿನ್ನೆಲೆ ಇಂದು ಮುಂಜಾನೆ ಇನ್ಸ್ಪೆಕ್ಟರ್ಗಳಾದ ಹರೀಶ್, ದೊಡ್ಡಬೆಳವಂಗಲ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾದರು. ಈ ವೇಳೆ ಪೊಲೀಸ್ ಸಿಬ್ಬಂದಿ ಹುಸೇನ್ ಮತ್ತು ಸುನೀಲ್ ಬಾಸಗಿ ಎನ್ನುವವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೊಡ್ಡಬೆಳವಂಗಲ ಕೊಲೆ ಪ್ರಕರಣ : ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಎಂ.ಟಿ.ಬಿ.ನಾಗರಾಜ್ ಸೂಚನೆ