ಆನೇಕಲ್ : ಆರ್ಆರ್ ನಗರ ಮತ್ತು ಶಿರಾ ಉಪಚುನಾವಣಾ ಪ್ರಚಾರಕ್ಕೆ ನಮಗೆ ಅಡ್ಡಿಪಡಿಸಿದ್ದಲ್ಲದೇ ಇದೀಗ ಕುಂಟೆತ್ತು, ಮುದಿ ಎತ್ತು, ಕನಕಪುರ ಬಂಡೆ ಚೂರು - ಚೂರು ಎಂಬ ಇತ್ಯಾದಿ ಹೇಳಿಕೆಗಳನ್ನು ನೀಡುವ ಮೂಲಕ ಅಸಂಸ್ಕೃತ ವ್ಯಕ್ತಿತ್ವ ತೋರ್ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ನಾಯಕರು ನೀಡುತ್ತಿರುವ ತರಹೇವಾರಿ ಹೇಳಿಕೆಗಳ ಬಗ್ಗೆ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಿಂದಿಸುವ ಕಲೆ ಬಿಜೆಪಿಯ ಪಾಳಯಕ್ಕೆ ಮಾತ್ರ ಕರಗತವಾಗಿದೆ. ಶಾಸಕರು ಸೇರಿದಂತೆ ಈ ದೇಶದ ಪ್ರಜಾಪ್ರಭುತ್ವವನ್ನ ಹಣ ಕೊಟ್ಟು ಕೊಳ್ಳುವ ಸಾಹಸಕ್ಕೆ ಕೈ ಹಾಕಿದ ಪಕ್ಷವನ್ನು ರಾಜ್ಯದ ಮುಗ್ಧ ಮತದಾರರು ಗಮನಿಸುತ್ತಿದ್ದಾರೆ ಎಂದರು.
ಆನೇಕಲ್ ಪುರಸಭೆಯ ಫಲಿತಾಂಶ:
ಆನೇಕಲ್ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 27 ಸದಸ್ಯ ಸಂಖ್ಯಾ ಬಲವನ್ನು ಹೊಂದಿರುವ ಆನೇಕಲ್ ಪುರಸಭೆಯಲ್ಲಿ ಬಿಜೆಪಿ 10 ಮತ ಪಡೆದರೆ ಕಾಂಗ್ರೆಸ್ 17 ಮತಗಳನ್ನು ಪಡೆದು ಜಯದ ನಗೆ ಬೀರಿತು.
ಶಾಸಕ ಬಿ ಶಿವಣ್ಣ ಹಾಗೂ ಸಂಸದ ಡಿಕೆ ಸುರೇಶ್ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ನ ಪದ್ಮನಾಭ ಅವರು 19 ಮತಗಳಿಂದ ಪುರಸಭೆಯ ಅಧ್ಯಕ್ಷರಾಗಿ ಚುನಾಯಿತಗೊಂಡರೆ ಎಸ್ ಲಲಿತಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ತಹಶೀಲ್ದಾರ್ ಸಿ ಮಹದೇವಯ್ಯ ತಿಳಿಸಿದರು. ಬಿಜೆಪಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗಿಳಿದಿದ್ದ ಶ್ರೀಕಾಂತ್ ಹಾಗೂ ಪವಿತ್ರ ಸೋಲನುಭವಿಸಬೇಕಾಯಿತು.