ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರವಾಗಿ ನೆಲಮಂಗಲದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಭರ್ಜರಿ ರೋಡ್ ಶೋ ನಡೆಸಿದರು.
ಪ್ರಚಾರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಕಾರ್ಯಕರ್ತರು ಸಂಭ್ರಮಪಟ್ಟರು. ದೇಶದ ಒಗ್ಗಟ್ಟಿಗಾಗಿ ನಾವು ಒಂದಾಗಿದ್ದೇವೆ, ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಬಹುಮತ ಬರಲಿಲ್ಲ. ಹೀಗಾಗಿ ರಾಜ್ಯದ ಹಿತದೃಷ್ಟಿಯಿಂದ ನಾವು ಮೈತ್ರಿ ಮಾಡಿಕೊಂಡೆವು. ಪಂಚ ರಾಜ್ಯಗಳಲ್ಲಿ ಸೇರಿ ಹಲವು ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಕಳೆದ 5 ವರ್ಷಗಳಲ್ಲಿ ಗುರುತರವಾದ ಒಂದೇ ಒಂದು ಕೆಲಸವನ್ನೂ ಬಿಜೆಪಿ ಮಾಡಿಲ್ಲ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ದೇಶದ ಯಾವ ಸಾಮಾನ್ಯನಿಗೂ ಅಚ್ಚೇದಿನ್ ಬಂದಿಲ್ಲ. ನೋಟ್ ಬ್ಯಾನ್ನಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬಡವರು ಮತ್ತು ಕೂಲಿ ಕಾರ್ಮಿಕರು ಕಷ್ಟಪಡಬೇಕಾಯಿತು. ರಾಮಮಂದಿರ ನಿರ್ಮಾಣಕ್ಕೆ ಹೋರಾಡಿದ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಎಲ್ಲಿದ್ದಾರೆ. ಬಿಜೆಪಿಯಲ್ಲಿ ಹಿರಿಯರಿಗೆ ಯಾವುದೇ ಮನ್ನಣೆ ಇಲ್ಲ. ಹಿರಿಯರನ್ನು ಮೂಲೆಗುಂಪು ಮಾಡಿದ್ದು ಬಿಜೆಪಿ ಪಕ್ಷ. ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜನ ವಿರೋಧ ವ್ಯಕ್ತಪಡಿಸಿದರು. ಆದರೂ ವೀರಪ್ಪ ಮೊಯ್ಲಿ ಹೋರಾಟ ಮಾಡಿ ನೀರನ್ನ ತರಲು ಹೋರಟಿದ್ದಾರೆ. ಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಸಮ್ಮಿಶ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದರು.
ನಮಾಜ್ ವೇಳೆ ಭಾಷಣ ನಿಲ್ಲಿಸಿದ ಡಿಕೆಶಿ:
ನೆಲಮಂಗಲದ ಪಟ್ಟಣದ ಬಸ್ ನಿಲ್ದಾಣದ ಬಳಿ ಭಾಷಣ ಮಾಡುವ ವೇಳೆ ನಮಾಜ್ ಮಾಡುವ ಧ್ವನಿ ಕೇಳಿದ ಡಿಕೆಶಿ ತಮ್ಮ ಭಾಷಣ ನಿಲ್ಲಿಸಿದರು.ನಮಾಜ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರಿಸಿದ್ದು ಗಮನ ಸೆಳೆಯಿತು.
ಆ್ಯಪಲ್ ಹಾರದಲ್ಲಿನ ಆ್ಯಪಲ್ಗಾಗಿ ಕಾರ್ಯಕರ್ತರ ಕಿತ್ತಾಟ:
ನೆಲಮಂಗಲದಲ್ಲಿ ಸಚಿವ ಡಿಕೆಶಿ ಸಮ್ಮಖದಲ್ಲಿ ರೋಡ್ ಶೋ ಹಮ್ಮಿಕೊಂಡಿದರಿಂದ ರೋಡ್ ಶೋ ವೇಳೆ ಡಿಕೆಶಿಗೆ ಕಾರ್ಯಕರ್ತರಿಂದ ಬೃಹತ್ ಆ್ಯಪಲ್ ಹಾರ ಹಾಕಲಾಯಿತು. ಆ್ಯಪಲ್ ಹಾರ ಹಾಕಿದ ಬಳಿಕ ಆ್ಯಪಲ್ಗಾಗಿ ಕಿತ್ತಾಟ ಶುರುವಾಯಿತು. ಆ್ಯಪಲ್ ಕಿತ್ತುಕೊಳ್ಳಲು ಕಾರ್ಯಕರ್ತರು ಪರಸ್ಪರ ಪೈಪೋಟಿ ನಡೆಸಿದರು. ಕ್ರೇನ್ನಲ್ಲಿ ತೂಗಾಡುತ್ತಿದ್ದ ಸೇಬಿನ ಹಾರ ಕಾರ್ಯಕರ್ತರಿಗೆ ಸಿಕ್ಕಿದ ಕ್ಷಣಾರ್ಧದಲ್ಲಿ ಇಡೀ ಆ್ಯಪಲ್ ಹಾರ ಖಾಲಿಯಾಗಿತ್ತು!