ದೇವನಹಳ್ಳಿ : ಪ್ರಸಾದ ತೆಗೆದುಕೊಳ್ಳಲು ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ ಸವರ್ಣಿಯ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಕುಟುಂಬದ ಮೇಲೆ ಮಾರಣಾಂತಿಕ ದಾಳಿ ಮತ್ತು ಬಾಲಕನ ತಾಯಿಯ ಗುಪ್ತಾಂಗದ ಮೇಲೂ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸದಂತೆ ಜಿಲ್ಲಾಡಳಿತದಿಂದ ಅಧಿಕಾರಿಗಳ ತಂಡ ದಲಿತ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಂತ್ವನ ಹೇಳಿ ಧೈರ್ಯ ತುಂಬಿದೆ.
ದೇವಸ್ಥಾನಕ್ಕೆ ಪ್ರಸಾದ ಸ್ವೀಕರಿಸಿಲು ಗ್ರಾಮದ ದಲಿತ ಕುಟುಂಬ ಮುನಿ ಅಂಜಿನಪ್ಪ ಮತ್ತು ಅರುಣಾರವರ ಕಿರಿಯ ಮಗ ಹೋಗಿದ್ದು, ಈ ವೇಳೆ ಸವರ್ಣಿಯ ಯುವಕ ಗಿರೀಶ್ ಬಾಲಕನ ಮೇಲೆ ನೂಕಿ ಹಲ್ಲೆ ನಡೆಸಿದ್ದ. ನಂತರ ಈ ಬಗ್ಗೆ ಗಿರೀಶನನ್ನ ಬಾಲಕನ ಹೆತ್ತವರು ಪ್ರಶ್ನೆ ಮಾಡಿದ್ದಕ್ಕೆ, ಸರ್ವಣಿಯರಾದ ಗಿರೀಶ್, ಮಂಜುನಾಥ್, ವೆಂಕಟೇಗೌಡ ದೊಣ್ಣೆಯಿಂದ ಮಾರಾಣಾಂತಿವಾಗಿ ಹಲ್ಲೆ ನಡೆಸಿದ್ದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಮತ್ತು ಮಹಿಳೆಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ 3 ಕಿ.ಮೀ ಅಂತರದಲ್ಲಿರುವ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣ ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಜಿಲ್ಲಾಡಳಿತ ಇಂದು ಉಪವಿಭಾಗಧಿಕಾರಿ ಅರುಳ್ ಕುಮಾರ್, ಡಿವೈಎಸ್ಪಿ ಟಿ ರಂಗಪ್ಪ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಪ್ಪ ಎಸ್ ಅವರು ಮುನಿಅಂಜಿನಪ್ಪ, ಅರುಣಾ ದಂಪತಿ ಮನೆಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಉಪ ವಿಭಾಗಧಿಕಾರಿ ಅರುಳ್ ಕುಮಾರ್, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ 3 ಪೊಲೀಸ್ ತಂಡಗಳ ರಚನೆಯಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುನಿಅಂಜಿನಪ್ಪ ಅವರು ತಮ್ಮ ಹೊಲಕ್ಕೆ ಹೋಗುವ ದಾರಿಯನ್ನ ಒತ್ತುವರಿ ಮಾಡಿರುವ ಬಗ್ಗೆ ತಹಶೀಲ್ದಾರ್ ಮೂಲಕ ಸ್ಥಳ ಪರಿಶೀಲನೆ ನಡೆಸಿ ನಕಾಶೆಯಲ್ಲಿ ರಸ್ತೆ ಇದ್ದರೆ ದಾರಿ ಬಿಡುವ ಭರವಸೆ ನೀಡಿದರು. ಜೊತೆಗೆ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲಿದಿರುವುದು ಗಮನಕ್ಕೆ ಬಂದಿದ್ದು, ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ಮುಕ್ತವಾಗಿದೆ. ದಲಿತರು ದೇವಾಲಯ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿ ಕೊಡುವುದಾಗಿ ಭರವಸೆ ನೀಡಿದರು.