ಬೆಂಗಳೂರು: ಪ್ರತಿ ವರ್ಷ ಗಾಂಧಿ ಜಯಂತಿ ಪ್ರಯುಕ್ತ ತಾಲೂಕಿನ ಒಂದು ಗ್ರಾಮದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ 'ಗಾಂಧಿ ಗ್ರಾಮ ಪುರಸ್ಕಾರ'ವನ್ನು ನೀಡಲಾಗುತ್ತಿದೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮ ಈ ಪುರಸ್ಕಾರಕ್ಕೆ ಪಾತ್ರವಾಗಿದೆ.
ಕಾರಹಳ್ಳಿ ಗ್ರಾಮ ಪಂಚಾಯತ್ 2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಈ ಗ್ರಾಮ ಪಂಚಾಯತ್ನಲ್ಲಿನ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಪುರಸ್ಕಾರ ಒಲಿದುಬಂದಿದೆ. ಇಲ್ಲಿ ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿನ ಎಲ್ಲಾ ಮನೆಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಸೂಕ್ತ ಅವಧಿಗೆ ಸಭೆ, ಸಂಪೂರ್ಣ ಸಾಕ್ಷರ ಪಂಚಾಯತ್, ಪ್ಲಾಸ್ಟಿಕ್ ನಿಷೇಧ ಹೀಗೆ ಹಲವು ಕಾರ್ಯಗಳಿಂದ ಗಮನ ಸೆಳೆದಿರುವ ಕಾರಹಳ್ಳಿ ಪಂಚಾಯತ್ ಜಿಲ್ಲೆಯಲ್ಲೇ ಮಾದರಿಯಾಗಿದೆ.
ಇನ್ನು ತಮ್ಮ ಗ್ರಾಮ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳ ಪ್ರಕಾರ ತೆರಿಗೆ ಪರಿಷ್ಕರಣೆ ಮಾಡಲಾಗಿದ್ದು, ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳ ಅನುದಾನ ಪೂರ್ಣ ಬಳಕೆಯಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಅರ್ಹ ಕುಟುಂಬಗಳಿಗೆ ಉದ್ಯೋಗ. ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, 691 ಕುಟುಂಬಗಳಿಗೆ ಕೊಳವೆ ಬಾವಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸೂಕ್ತ ಬೀದಿ ದೀಪಗಳ ವ್ಯವಸ್ಥೆ, ಪ್ರತಿ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದು, ಬಹಿರ್ದೆಸೆ ಮುಕ್ತ ಗ್ರಾಮವಾಗಿದೆ. ವ್ಯವಸ್ಥಿತ ಚರಂಡಿ ನಿರ್ಮಾಣ, ನಿರ್ವಹಣೆಯಲ್ಲಿ ಶೇ.100 ಸಾಧನೆಯಾಗಿದೆ ಎಂದು ಗ್ರಾ. ಪಂ. ಅಧ್ಯಕ್ಷ ದೇವರಾಜ್ ಸಂತಸ ವ್ಯಕ್ತಪಡಿಸಿದರು.