ಬೆಂಗಳೂರು: ಚನ್ನಸಂದ್ರ ಹಾಗೂ ವಾರಾಣಾಸಿ, ಭೈರ್ತಿ, ಕಲ್ಕೆರೆ ಪ್ರದೇಶದಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ಹಾಗೂ ಸತ್ತ ಕೋಳಿಯನ್ನು ಕೆಲವು ಕೋಳಿ ಅಂಗಡಿ ಮಾಲೀಕರು ರಾಂಪುರ ಕೆರೆಯ ಒಳಗೆ ಹಾಗೂ ಹೊರವಲಯದ ರಸ್ತೆಗಳ ಅಂಚಿನಲ್ಲಿ ಹಾಕುತ್ತಿದ್ದಾರೆ. ಇದರಿಂದ ದುರ್ವಾಸನೆ ಬರುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಕೆರೆಯ ಬೇಲಿ ಒಳಗೆ ಹಾಗೂ ನಿರ್ಜನ ಪ್ರದೇಶಗಳಲ್ಲಿ ಮನಸೋ ಇಚ್ಛೆ ಬಿಸಾಡಲಾಗುತ್ತಿದೆ. ನಿರ್ಜನ ಪ್ರದೇಶದಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯವನ್ನು ಅದರಲ್ಲಿ ಮುಚ್ಚಿ ವಿಲೇವಾರಿ ಮಾಡಬೇಕಾಗಿರುವುದು ನಿಯಮ. ಆದರೆ, ಕೆಲವರು ಈ ಗೋಜಿಗೆ ಹೋಗದೆ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯವನ್ನು ತುಂಬಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ಆ ಪ್ರದೇಶದ ವಾತಾವರಣ ಕಲುಷಿತವಾಗುವ ಜತೆಗೆ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ.
ಏನಿದು ಕೋಳಿ ತ್ಯಾಜ್ಯ?:
ಕೋಳಿ ಮಾಂಸ ಸ್ವಚ್ಛ ಮಾಡುವಾಗ ಅದರ ದೇಹದೊಳಗಿನ ಕರುಳು, ಮೇಲ್ಮೈನ ರೆಕ್ಕೆ -ಪುಕ್ಕ, ಕಾಲಿನ ಸ್ವಲ್ಪ ಭಾಗ ತೆಗೆದು ಹಾಕಲಾಗುತ್ತದೆ. ನಂತರ ಅದನ್ನು ಒಂದೆಡೆ ಶೇಖರಿಸಿ ವಿಲೇವಾರಿ ಮಾಡಲಾಗುತ್ತದೆ. ಈ ತ್ಯಾಜ್ಯವನ್ನು ನಿರ್ಜನ ಪ್ರದೇಶಗಳಲ್ಲಿ ಹೂತಿಟ್ಟು ವಿಲೇವಾರಿ ಮಾಡಬೇಕಾಗುತ್ತದೆ. ಕೆಲ ಕೋಳಿ ಅಂಗಡಿ ಮಾಲೀಕರು ಇದನ್ನು ಅನುಸರಿಸಿದರೆ ಇನ್ನೂ ಕೆಲವರು ರಸ್ತೆ ಬದಿಯಲ್ಲಿ, ಗುಂಡಿಗಳಲ್ಲಿ, ಕೆರೆ ಏರಿ ರಸ್ತೆಗಳಲ್ಲಿ ಬಿಸಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಬೀದಿ ನಾಯಿಗಳ ಹಾವಳಿ:
ಎಲ್ಲೆಂದರಲ್ಲಿ ಬಿಸಾಡುತ್ತಿರುವ ಈ ಕೋಳಿ ತ್ಯಾಜ್ಯದಿಂದಾಗಿ ಬೀದಿ ನಾಯಿಗಳಿಗೆ ಪ್ರತಿದಿನ ಮೃಷ್ಟಾನ್ನ ಸಿಕ್ಕಂತಾಗುತ್ತಿದೆ. ಇದನ್ನು ತಿಂದು ದಷ್ಟಪುಷ್ಟವಾಗಿ ಕೊಬ್ಬಿರುವ ಬೀದಿ ನಾಯಿಗಳು ಮಾಂಸದ ಆಸೆಗೆ ಕೆರೆಯಂಗಳದಲ್ಲಿ ಒಂಟಿಯಾಗಿ ಮೇಯುವ ಕುರಿ, ಮೇಕೆ, ಕರುಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ. ಇದರ ಜತೆಗೆ ರಸ್ತೆಬದಿಯಲ್ಲಿ ಸಂಚರಿಸುವ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿವೆ.