ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ. ಬೇರೊಬ್ಬರು ಬರೆದಿದ್ದನ್ನು ಅಂಬೇಡ್ಕರ್ ಅವರು ಬರೆದರು ಎಂದು ಪಠ್ಯಪುಸ್ತಕಗಳಲ್ಲಿ ಮುದ್ರಿಸಿ ಅವಹೇಳನ ಮಾಡಿದೆ. ಹಾಗಾಗಿ ಕೂಡಲೇ ಶಿಕ್ಷಣ ಸಚಿವ ಸುರೇಶ್‌ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಇಂದು ನಗರದಲ್ಲಿ ಸೇರಿದ ದಲಿತ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಶಿಕ್ಷಣ ಸಚಿವ ಸುರೇಶ್‌ಕುಮಾರ್ ಪ್ರತಿಕೃತಿ ದಹನ ಮಾಡಿ ಸರ್ಕಾರದ ನೀತಿ ಖಂಡಿಸಿ ಪ್ರತಿಭಟಿಸಿದರು. ತಾಲೂಕು ಕಚೇರಿ ವೃತ್ತದಲ್ಲಿ ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘ ಸಂಸ್ಥೆಯ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ರಾಜ್ಯ ಸರ್ಕಾರ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ. ಬೇರೊಬ್ಬರು ಬರೆದಿದ್ದನ್ನು ಅಂಬೇಡ್ಕರ್ ಅವರು ಬರೆದರು ಎಂದು ಪಠ್ಯಪುಸ್ತಕಗಳಲ್ಲಿ ಮುದ್ರಿಸಿ ಬೋಧಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ದೂರಿದರು.
ಸರ್ಕಾರದ ಯಾವುದೇ ತೀರ್ಮಾನಗಳು ಆಯಾ ಇಲಾಖೆಯ ಸಚಿವರಿಗೆ ತಿಳಿಯದೆ ಕಾರ್ಯಗತವಾಗುವುದಿಲ್ಲ. ಇದು ಸರ್ಕಾರದ ವ್ಯವಸ್ಥಿತ ಹುನ್ನಾರಗಳಲ್ಲಿ ಒಂದು. ಈ ಕೂಡಲೇ ಶಿಕ್ಷಣ ಸಚಿವರಾದ ಸುರೇಶ್‌ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಇದಕ್ಕೆ ಕಾರಣರಾದ ಸರ್ಕಾರದ ಕಾರ್ಯದರ್ಶಿ ಉಮಾ ಶಂಕರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.