ದೇವನಹಳ್ಳಿ : ಪ್ರಸಾದ ತೆಗೆದುಕೊಳ್ಳಲು ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ, ಸವರ್ಣಿಯ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಕುಟುಂಬದ ಮೇಲೆ ಮಾರಣಾಂತಿಕ ದಾಳಿ ಮತ್ತು ಬಾಲಕನ ತಾಯಿಯ ಗುಪ್ತಾಂಗದ ಮೇಲೂ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ.
ಮುನಿಆಂಜಿನಪ್ಪ ಎಂಬುವರ ಕುಟುಂಬದ ಮೇಲೆ ಸವರ್ಣಿಯರ ಕುಟುಂಬದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಯಿಂದ ಜರ್ಜರಿತರಾಗಿರುವ ಕುಟುಂಬ, ಗ್ರಾಮದಲ್ಲಿ ತಮಗೆ ರಕ್ಷಣೆ ಬೇಕೆಂದು ಕಣ್ಣೀರು ಹಾಕುತ್ತಿದೆ.
ದಲಿತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಶೋರ್, ಮಂಜುನಾಥ್, ವೆಂಕಟೇಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಹಿನ್ನೆಲೆ : ಸರ್ಕಾರಿ ಶಾಲೆ ಶಿಕ್ಷಕ ಮುನಿಆಂಜಿನಪ್ಪ ಮತ್ತು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಅರುಣಾ ಕೆ. ಎಂ ದಂಪತಿಗೆ ಇಬ್ಬರು ಮಕ್ಕಳು. ದಿನಾಂಕ 14-08-21ರಂದು ಶ್ರಾವಣ ಶನಿವಾರ ಹಿನ್ನೆಲೆ ಗ್ರಾಮದ ರಾಮನಾಥಪುರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಇತ್ತು. ಹೀಗಾಗಿ, ಇವರ ಕಿರಿಯ ಮಗ ಪ್ರಸಾದ ತೆಗೆದುಕೊಳ್ಳಲು ದೇವಸ್ಥಾನಕ್ಕೆ ಹೋಗಿದ್ದಾನೆ.
ಆಗ ಸ್ನೇಹಿತರೊಂದಿಗೆ ಅಲ್ಲಿಯೇ ಆಟವಾಡುತ್ತಿದ್ದ ಸರ್ವಣಿಯ ಜಾತಿಗೆ ಸೇರಿದ ಕಿಶೋರ್ ಎಂಬ ಯುವಕ ಬಾಲಕನನ್ನ ನೂಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಬಾಲಕನ ಕಾಲಿಗೆ ಗಾಯವಾಗಿ ರಾತ್ರಿ ಜ್ವರ ಬಂದಿದೆ. ಬಾಲಕನ ತಾಯಿ ಅರುಣಾ ದಿನಾಂಕ 16-08-21ರ ಮಧ್ಯಾಹ್ನ 4-15ರ ಸಮಯದಲ್ಲಿ ಡೇರಿಗೆ ಹಾಲು ಹಾಕಲು ಹೋದಾಗ ಎದುರಿಗೆ ಕಿಶೋರ್ ಸಿಕ್ಕಿದ್ದಾನೆ. ಆಗ ಹಲ್ಲೆ ಕುರಿತು ಪ್ರಶ್ನಿಸಿದ್ದಾರೆ.
ಇದರಿಂದ ಕೇರಳಿದ ಕಿಶೋರ್ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ಧದಿಂದ ಬೈದಿದ್ದಾನೆ. ಆಗ ಅರುಣಾರವರ ಪತಿ ಮುನಿಆಂಜಿನಪ್ಪ ಸಹ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ತನ್ನ ಸಂಬಂಧಿಕರಿಗೆ ಫೋನ್ ಮಾಡಿದ ಕಿಶೋರ್ ಸ್ಥಳಕ್ಕೆ ಮಂಜುನಾಥ್ ಮತ್ತು ವೆಂಕಟೇಗೌಡನನ್ನ ಕರೆಸಿಕೊಂಡಿದ್ದ.
ಸವರ್ಣಿಯ ಜಾತಿಗೆ ಸೇರಿದ ಮೂವರು ಮುನಿಆಂಜಿನಪ್ಪ ಮತ್ತು ಅರುಣಾರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಅರುಣಾರವರ ಗುಪ್ತಾಂಗದ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಠಾಣೆಗೆ ದೂರು ನೀಡುತ್ತಾರೆಂದು ಗ್ರಾಮದಿಂದ ಹೊರಗೆ ಹೋಗದಂತೆ ಬೆದರಿಕೆ ಹಾಕಿದ್ದಾರೆಂದು ದಲಿತ ಕುಟುಂಬ ಕಣ್ಣೀರು ಹಾಕಿ ತಮಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಹೊಲಕ್ಕೆ ಹೋಗುವ ದಾರಿ ಒತ್ತುವರಿ, ಪ್ರಶ್ನೆ ಮಾಡಿದಕ್ಕೆ ಹಲ್ಲೆ : ಮುನಿಆಂಜಿನಪ್ಪ ಹೊಲಕ್ಕೆ ಹೋಗುವ ದಾರಿಯನ್ನ ಸವರ್ಣಿಯರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಹೊಲಕ್ಕೆ ಗೊಬ್ಬರ ಸಾಗಿಸಲು ಕಷ್ಟವಾಗಿತ್ತು. ದಾರಿ ಒತ್ತುವರಿ ಮಾಡಿದವರನ್ನ ಮುನಿಆಂಜಿನಪ್ಪ ಪ್ರಶ್ನೆ ಮಾಡಿದಕ್ಕೆ ದ್ವೇಷ ಸಾಧಿಸಿದ ಸವರ್ಣಿಯ ಕುಟುಂಬ, ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದೆ. ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಈವರೆಗೂ ಪ್ರವೇಶ ನೀಡಿಲ್ಲ. ಬಹಳ ಹಿಂದಿನಿಂದಲೂ ಗ್ರಾಮದಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಆದರೆ, ದಲಿತರು ಭಯದಿಂದ ಸಹಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಆರೋಪಿಗಳನ್ನ ಬಂಧಿಸಲು ದಲಿತ ಸಂಘಟನೆಗಳ ಒತ್ತಾಯ : ಘಟನೆ ನಂತರ ಆರೋಪಿಗಳಾದ ಕಿಶೋರ್, ಮಂಜುನಾಥ್, ವೆಂಕಟೇಗೌಡ ಎಂಬುವರು ಪರಾರಿಯಾಗಿದ್ದಾರೆ. ಘಟನೆ ನಡೆದು 4 ದಿನವಾದರು ಆರೋಪಿಗಳನ್ನ ಬಂಧಿಸದೆ ಇರುವುದು ದಲಿತ ಸಂಘಟನೆಗಳ ಅಕ್ರೋಶಕ್ಕೆ ಕಾರಣವಾಗಿದೆ. ಮುನಿಆಂಜಿನಪ್ಪ ಮನೆಗೆ ಭೇಟಿ ನೀಡಿದ ದಲಿತ ಮುಖಂಡರು ಧೈರ್ಯ ತುಂಬಿದ್ದಾರೆ.
ಓದಿ: ಸಿಎಂ ಭೇಟಿಯಾದ ಶೋಭಾ ಕರಂದ್ಲಾಜೆ : ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚನೆ