ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಸುಮಾರು 2 ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಉತ್ತಮ ಹಾಲು ಉತ್ಪಾದಕರಿಗೆ, ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಪ್ಲಾಸ್ಟಿಕ್ ನಿಷೇಧ. ಈ ಹಿನ್ನಲೆ, ನಮ್ಮ ಬಮೂಲ್ನಲ್ಲಿ ಪ್ಲಾಸ್ಟಿಕ್ ನಿಷೇಧದ ಜೊತೆಗೆ ಹಾಲಿನ ಪ್ಲಾಸ್ಟಿಕ್ ಮರುಚಕ್ರೀಕರಣಕ್ಕೆ ಒತ್ತು ನೀಡಲಿದ್ದೇವೆ. ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ ಒಂದು ರೂಪಾಯಿ ರಿಯಾಯತಿ ನೀಡುವ ಕ್ರಮದ ಬಗ್ಗೆ ಬಮೂಲ್ ಚಿಂತನೆ ನಡೆಸಿದೆ. ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.
ನೆಲಮಂಗಲ ತಾಲೂಕು ಕಳೆದ ಹಲವಾರು ವರ್ಷಗಳಿಂದ ಮಾಡದ ಸಾಧನೆಯನ್ನು ಕಳೆದ ಮೂರು ತಿಂಗಳಲ್ಲಿ ಮಾಡಿದೆ. ಹಾಲಿನ ಗುಣಮಟ್ಟದಲ್ಲಿ ನೆಲಮಂಗಲ ತಾಲೂಕು 92.23 ಎಸ್ಎನ್ಎಫ್ ಹಾಗೂ ಜಿಡ್ಡಿನ ಅಂಶದಲ್ಲಿ 4.2 ಅಂಕ ಗಳಿಸಿ ದಾಖಲೆ ಮಾಡಿ ಪ್ರಥಮ ಸ್ಥಾನದಲ್ಲಿದೆ ಎಂದರು.