ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಲ್ಲು ಗಣಿಗಾರಿಕೆ ಕುರಿತು 'ಈಟಿವಿ ಭಾರತ' ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾ ಗಣಿ ಟಾಸ್ಕ್ ಪೋರ್ಸ್ ತಂಡ ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಓದಿ: ಕ್ರಷರ್‌ಗಳ ಹಾವಳಿಯಿಂದ ಬರಡಾಯ್ತು ಹಳೇಕೋಟೆ ಗ್ರಾಮಸ್ಥರ ಬದುಕು!
ದೇವನಹಳ್ಳಿ ತಾಲೂಕಿನ ಮುದುಗುರ್ಕಿ ಗ್ರಾಮದಲ್ಲಿನ ಸರ್ವೆ ನಂಬರ್ 31ರಲ್ಲಿನ ಕಲ್ಲು ಗಣಿಗಾರಿಕೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಸರ್ವೆ ನಂಬರ್ 6ರಲ್ಲಿ ಮೂರು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ರಷರ್‌ಗಳ ಬಗ್ಗೆ ವರದಿ ಮಾಡಿತ್ತು.
ವರದಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸವಿವರವಾಗಿ ವರದಿ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಗಣಿ ಟಾಸ್ಕ್ ಪೋರ್ಸ್ ತಂಡ ಕಲ್ಲು ಗಣಿಗಾರಿಕೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ರಂಗಪ್ಪ, ದೊಡ್ಡಬಳ್ಳಾಪುರ ತಹಶೀಲ್ದಾರ್ ಶಿವರಾಜು, ಇನ್ಸ್ಪೆಕ್ಟರ್ ನವೀನ್ ಕುಮಾರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಗಣಿ ಟಾಸ್ಕ್ ತಂಡ ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ನಡೆಯುತ್ತಿರುವ ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭೇಟಿಯ ಸಮಯದಲ್ಲಿ ಕ್ರಷರ್ ಮತ್ತು ಕ್ವಾರೆ ಲೈಸೆನ್ಸ್ ದಾಖಲೆಗಳ ಪರಿಶೀಲಿಸಲಾಯಿತು.
ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ವಸ್ತುಗಳನ್ನು ಸ್ಫೋಟಿಸುವ ವ್ಯಕ್ತಿಗಳು ಭೂವಿಜ್ಞಾನ ಇಲಾಖೆಯ ಮ್ಯಾಟ್ ಪರೀಕ್ಷೆ ಪಾಸು ಮಾಡಿರುವ ಬಗ್ಗೆ ಪರಿಶೀಲನೆ, ಸ್ಫೋಟಕ ವಸ್ತುಗಳನ್ನು ಸಾಗಣೆ ಮಾಡುವ ವಿಧಾನ, ಸ್ಫೋಟಿಸುವ ಪ್ರಮಾಣದ ಬಗ್ಗೆ ಕ್ರಷರ್ ಮಾಲೀಕರಿಂದ ವಿವರ ಪಡೆಯಲಾಯಿತು.
ಕ್ರಷರ್‌ನ ಧೂಳನ್ನು ನಿಯಂತ್ರಿಸಲು ಕ್ರಷರ್ ಮಾಲೀಕರು ಕೈಗೊಂಡಿರುವ ಸುರಕ್ಷತಾ ಕ್ರಮಗಳು. ಗ್ರಾಮಗಳಿಂದ ಕ್ರಷರ್‌ಗಳು ಇರುವಂತಹ ದೂರ. ಕ್ರಷರ್‌ನಿಂದ ಕಲ್ಲುಗಳು ಸಿಡಿಯಬಹುದಾದ ಪ್ರಮಾಣ. ಕ್ರಷರ್ ಧೂಳು ವ್ಯಾಪಿಸಬಹುದಾದ ಪ್ರಮಾಣ ಇವುಗಳ ಬಗ್ಗೆ ಮಾಲೀಕರೊಂದಿಗೆ ಚರ್ಚಿಸಲಾಯಿತು.
ಲಾರಿ ಮಾಲೀಕರಿಗೆ ಕ್ರಷರ್‌ಗಳ ಮಾಲೀಕರಿಗೆ ಸುರಕ್ಷಾ ಕ್ರಮಗಳನ್ನು ಪಾಲಿಸುವ ಬಗ್ಗೆ ಸೂಚನೆ ನೀಡಲಾಗಿತು. ಜಿಲ್ಲಾ ಗಣಿ ಟಾಸ್ಕ್ ಪೋರ್ಸ್ ಕೇವಲ ಕ್ರಷರ್ ಮಾಲೀಕರೊಂದಿಗೆ ಚರ್ಚಿಸಿದೆ. ಆದರೆ, ಕಲ್ಲು ಗಣಿಗಾರಿಕೆಯಿಂದ ತೊಂದರೆಗೊಳಗಾಗಿರುವ ಗ್ರಾಮಸ್ಥರ ಸಮಸ್ಯೆಗಳನ್ನ ಆಲಿಸಬೇಕೆಂಬುದು ಗ್ರಾಮಸ್ಥರ ಮನವಿಯಾಗಿತ್ತು.