ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ತಾಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತರು ಬೆಳೆದಿದ್ದ ತೋಟಗಾರಿಕಾ ಬೆಳೆಗಳಾದ ಪಡುವಲಕಾಯಿ, ಟೊಮೆಟೊ ಬೆಳೆಗಳು ನೆಲಕಚ್ಚಿವೆ. ಫಸಲಿಗೆ ಬಂದಿದ್ದ ಬೆಳೆಗಳನ್ನು ಕಳೆದುಕೊಂಡು ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಶಿವಪುರದ ರೈತ ಶ್ರೀನಿವಾಸ್ ಸೊಣ್ಣಪ್ಪನಹಳ್ಳಿ, ಗ್ರಾಮದಲ್ಲಿ ಲೀಸ್ ಗೆ ಜಮೀನು ಪಡೆದು ಹೈಬ್ರೀಡ್ ಪಡುವಲಕಾಯಿ ಮತ್ತು ಟೊಮೆಟೊ ಬೆಳೆದಿದ್ದರು. ಕೊಯ್ಲಿಗೆ ಬಂದಿದ್ದ ಟೊಮೆಟೊ ಬೆಳೆಯಿಂದ ಒಂದು ಫಸಲನ್ನು ಪಡೆದಿದ್ದರು. ಆದರೆ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಳೆಗಳು ನಾಶವಾಗಿದ್ದು, ಲಕ್ಷಗಟ್ಟಲೆ ಬಂಡವಾಳ ಹೂಡಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಶ್ರೀನಿವಾಸ್ ಕಂಗಾಲಾಗಿದ್ದಾರೆ.
ಅಲ್ಲದೆ ಇಲ್ಲಿನ ಲಕ್ಷ್ಮೀದೇವಿಪುರದ ರೈತ ನಾರಾಯಣಗೌಡ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ. ಈಗಾಗಲೇ ದ್ರಾಕ್ಷಿ ಬೆಳೆದು 5 ಲಕ್ಷ ಹಣ ಕಳೆದುಕೊಂಡು ಸಂಕಷ್ಟದಲ್ಲಿದ್ದ ಅವರು ಬಳಿಕ 1 ಎಕರೆ ಜಮೀನಿನಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಪಡುವಲಕಾಯಿ ಬೆಳೆದಿದ್ದರು. ಆದರೆ ಭಾರಿ ಮಳೆಗೆ ಬೆಳೆ ನಾಶವಾಗಿದ್ದು, ಈ ಬೆಳೆಯಲ್ಲಿ ಬರುವ ಲಾಭದಿಂದ ಸಾಲ ತೀರಿಸುವ ಆಸೆಗೆ ತಣ್ಣೀರೆರಚಿದಂತಾಗಿದೆ. ಹೀಗೆ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಲ್ಲಿನ ರಾಜಘಟ್ಟ ಗ್ರಾಮದಲ್ಲಿ ವಾಟರ್ ಮ್ಯಾನ್ ಶ್ರೀನಿವಾಸ್ ಅವರು ಚರಂಡಿಗೆ ಮಣ್ಣು ಸುರಿದು ಬಂದ್ ಮಾಡಿದ್ದು, ನಿನ್ನೆ ರಾತ್ರಿ ಸುರಿದ ಮಳೆಗೆ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ರಾಮಾಂಜಿನಪ್ಪನವರ ಮನೆಗೆ ನೀರು ನುಗ್ಗಿರುವ ಘಟನೆ ನಡೆದಿದೆ.
ಓದಿ : ಪ್ಲಾಸ್ಟಿಕ್ ಬಾವುಟಕ್ಕೆ ವಿರೋಧ: ಮೈಸೂರಲ್ಲಿ ನಾಗರಿಕ ಸಮಿತಿಯಿಂದ ಪ್ರತಿಭಟನೆ