ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋಗಿದ್ದ ಕಾನ್ಸ್‌ಟೇಬಲ್ ಮೇಲೆ ಮತ್ತೊಂದು ಕಾರು ಹರಿದು ಅವರು ದುರಂತ ಅಂತ್ಯಕಂಡ ಘಟನೆ ಇಂದು ಬೆಳಗಿನ ಜಾವ ದೇವನಹಳ್ಳಿ ಹೈವೇಯ ಚಿಕ್ಕಜಾಲ ಬಳಿ ನಡೆದಿದೆ. ರಾತ್ರಿ ಪಾಳೆಯದಲ್ಲಿ ಕರ್ತವ್ಯದಲ್ಲಿದ್ದ ಸುರೇಶ್ ಮೃತರೆಂದು ತಿಳಿದುಬಂದಿದೆ.
ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೇ ಗೌಡ ಮತ್ತು ಅವರ ಜೀಪ್ ಚಾಲಕ ಸುರೇಶ್ ಚಿಕ್ಕಜಾಲ ಬಳಿ ಬಂದಾಗ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಕಂಡು ಪರಿಶೀಲನೆಗೆ ಮುಂದಾಗಿದ್ದಾರೆ. ಕಾನ್ಸ್‌ಟೆಬಲ್ ಸುರೇಶ್ ಜೀಪ್ನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅದೇ ಸಮಯಕ್ಕೆ ವೇಗವಾಗಿ ಬಂದ ಇನ್ನೊಂದು ಕಾರು ಸುರೇಶ್ ಅವರಿಗೆ ಡಿಕ್ಕಿಯಾಗಿದೆ. ಬಳಿಕ ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೂ ಗುದ್ದಿದೆ. ಪರಿಣಾಮ ಸುರೇಶ್ ಮೃತಪಟ್ಟಿದ್ದಾರೆ. ಇನ್ಸ್ಪೆಕ್ಟರ್ಗೆ ಫೋನ್ ಕಾಲ್ ಬಂದಿದ್ದು ಮಾತನಾಡಲು ಕೊಂಚ ರಸ್ತೆಬದಿಗೆ ತೆರಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ನಿಂತಿದ್ದ ಕಾರಿನಲ್ಲಿ ಕುಳಿತಿದ್ದ ಚಾಲಕನ ಕೈಕಾಲುಗಳಿಗೂ ಗಂಭೀರ ಗಾಯಗಳಾಗಿವೆ.
ಅಪಘಾತವೆಸಗಿದ ಕಾರಿನಲ್ಲಿ ಮೂವರು ಯುವಕರು, ಮೂವರು ಯುವತಿಯರಿದ್ದರು. ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೆಬಲ್ ಸುರೇಶ್ ದುರ್ಮರಣಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈವೇಗಳಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಲೈಟಿಂಗ್ ಬ್ಯಾಟರ್ನ್, ರಿಫ್ಲೆಕ್ಟ್ ಜಾಕೆಟ್ ಬಳಸಬೇಕು. ಈ ಮೂಲಕ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಪ್ರತ್ಯೇಕ ಅಪಘಾತ ಪ್ರಕರಣಗಳು..: ನಿನ್ನೆ ಒಂದೇ ದಿನ ನಡೆದ 2 ಅಪಘಾತ ಪ್ರಕರಣಗಳಲ್ಲಿ ಓರ್ವ ಶಿಕ್ಷಕ ಹಾಗು ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಬೀದರ್ನಲ್ಲಿ ಎರಡು ದಿನಗಳ ಹಿಂದಷ್ಟೇ ಮದುವೆಯಾದ ಶಿಕ್ಷಕ ಅರುಣ್ ಕಾಶಿನಾಥ್ ಪಡಸಾಲೆ ಹೋಗುತ್ತಿದ್ದ ಬೈಕ್ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಘಟನೆ ನಡೆದಿದೆ. ಇವರು ಕಳೆದ ತಿಂಗಳ ಜೂನ್ 29ರಂದು ವಿವಾಹವಾಗಿದ್ದು, ಪತ್ನಿಯ ಗ್ರಾಮ ಮುಗನೂರ್ನಿಂದ ನೌಬಾದ್ಗೆ ಬೈಕ್ನಲ್ಲಿ ಬರುತ್ತಿದ್ದರು. ಅರುಣ್ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ನೌಬಾದ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾವೇರಿಯಲ್ಲಿ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ವೈದ್ಯಕೀಯ ವಿದ್ಯಾರ್ಥಿ ಅಖಿಲ ಕುಂಬಾರ ಕಾರಿನಲ್ಲಿ ಬೆಳಗಾವಿಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದಾಗ ಲಾರಿಯೊಂದಿಗೆ ಅಪಘಾತವಾಗಿದೆ. ಕಾರಿನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಅಖಿಲ್ ಬೆಳಗಾವಿಯಲ್ಲಿ ಎಂ.ಡಿ ವಿದ್ಯಾಭ್ಯಾಸ ಮಾಡುತ್ತಿದ್ದರು.