ದೊಡ್ಡಬಳ್ಳಾಪುರ: ಕೊರೊನಾ ಸೋಂಕಿತ ವ್ಯಕ್ತಿಯ ಕುಟುಂಬವನ್ನು ಮಾಜಿ ನಗರಸಭಾ ಅಧ್ಯಕ್ಷರೊಬ್ಬರ ಕುಟುಂಬ ಸದಸ್ಯರು ನಿಂದಿಸಿದ ಹಿನ್ನೆಲೆ ಮನನೊಂದ ಸೋಂಕಿತ ಕುಟುಂಬದ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ದೊಡ್ಡಬಳ್ಳಾಪುರ ನಗರದ ಬಸವ ಭವನ ಹಿಂಭಾಗದಲ್ಲಿ ವಾಸವಾಗಿದ್ದ ವ್ಯಕ್ತಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ನಗರದ ಖಾಸ್ ಬಾಗ್ನಲ್ಲಿ ವಾಸವಾಗಿದ್ದ ಆತನ ಅಪ್ಪ ಅಮ್ಮ ಮಗನನ್ನ ನೋಡಿಕೊಳ್ಳಲು ಬಂದಿದ್ದರು. ಆತನ ತಾಯಿ ಮಗನನ್ನು ನೋಡಿಕೊಳ್ಳುತ್ತಿದ್ದರು. ವರದಿ ಬಂದಾಗ ಮಗನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಮ್ಮನಿಗೂ ಕೊರೊನಾ ಪಾಸಿಟಿವ್ ದೃಡಪಟ್ಟಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖಾಸ್ ಬಾಗ್ ನಲ್ಲಿ ವಾಸವಾಗಿದ್ದ ನಾಗರಾಜ್ ಕುಟುಂಬವನ್ನು ದೊಡ್ಡಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷ ಮುದ್ದಪ್ಪ ಮತ್ತು ಆತನ ಅಣ್ಣ ಹನುಮಂತರಾಯಪ್ಪ ನಿಂದಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಏರಿಯಾ ಖಾಲಿ ಮಾಡುವಂತೆ ನಿಂದನೆಯ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುದ್ದಪ್ಪ ಮತ್ತು ಆತನ ಅಣ್ಣ ಹನುಮಂತರಾಯಪ್ಪ ನಿಂದಿಸಿರುವುದರ ಬಗ್ಗೆ ನೊಂದು ಮಗಳ ಜೊತೆ ನಾಗರಾಜ್ ಮಾತನಾಡಿರುವ ಆಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಏರಿಯಾ ಜನರಿಂದ ಸಾಕಷ್ಟು ನೊಂದಿದ್ದ ನಾಗರಾಜ್ ನಾಪತ್ತೆಯಾಗಿದ್ದ. ಮಗಳೊಂದಿಗೆ ಸಾಕಷ್ಟು ನೊಂದು ಮಾತನಾಡಿದ ಹಿನ್ನೆಲೆ ಮಾಜಿ ನಗರಸಭಾ ಅಧ್ಯಕ್ಷ ಮತ್ತು ಆತನ ಅಣ್ಣನ ನಿಂದನೆ ಮಾತುಗಳಿಗೆ ಮನನೊಂದ ಆತ್ಮಹತ್ಯೆಗೆ ಶರಣಾಗಿರುವ ಸಂಶಯ ವ್ಯಕ್ತವಾಗಿದೆ. ನಾಗರಾಜ್ ಕಾಣಿಸದ ಹಿನ್ನೆಲೆ ದೊಡ್ಡಬಳ್ಳಾಪುರದ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು.
ಇಂದು ಹೆಸರಘಟ್ಟ ಕೆರೆಯ ಮರಕ್ಕೆ ನೇಣಿಗೆ ಶರಣಾಗಿರುವ ರೀತಿಯಲ್ಲಿ ನಾಗರಾಜ್ ಶವ ಪತ್ತೆಯಾಗಿದೆ. ಈ ಸಂಬಂಧ ಸೊಲದೇಲನಹಳ್ಳಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.