ಹೊಸಕೋಟೆ: ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆ ಎಲ್ಲ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಒಂದೆಡೆ ಹೂವು ಬೆಳೆಗಾರರು ಹೂ ಮಾರಲಾಗದೇ ಸಂಕಷ್ಟಕ್ಕೆ ಸಿಲುಕಿದ್ರೆ. ಇನ್ನೊಂದೆಡೆ ಹೂವಿನ ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಕಡಿಮೆ ಬೆಲೆಗೂ ಹೂವನ್ನ ಕೊಳ್ಳುವವರಿಲ್ಲದೇ ರೈತರು ಕಂಗಾಲಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅಟ್ಟೂರು, ಹಲಸಹಳ್ಳಿ, ಮೈಲಾಪುರ, ನಿಡಗಟ್ಟ ಸುತ್ತಲಿನ ಗ್ರಾಮದಲ್ಲಿ ಸುಮಾರು 40 ಎಕರೆ ಜಮೀನಿನಲ್ಲಿ ಹೂ ಬೆಳೆದಿದ್ದ ರೈತರು ಕಣ್ಣೀರು ಹಾಕುವಂತಾಗಿದೆ. ಅದೇ ರೀತಿ ಅಟ್ಟೂರಿನ ರೈತರಾದ ಭೀಮಣ್ಣ ಹಾಗೂ ಮಲ್ಲಿಕಾರ್ಜುನಯ್ಯ ಅವರು ತಾವು ಬೆಳೆದ ಹೂವಿನ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಕಷ್ಟದಿಂದ ಪಾರಾಗಲು ನೆರವು ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಬೆಲೆಯುವ ಹೂ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹೀಗೆ ಹಲವಾರು ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು.
ರೈತ ಭೀಮಣ್ಣ ಮಾತನಾಡಿ, ನಾವು ಸುಮಾರು 1ಎಕರೆಯಲ್ಲಿ ಗುಲಾಬಿ ಹೂಗಳನ್ನು ಬೆಳೆದಿದ್ದು, ಕೋವಿಡ್ -19 ಲಾಕ್ ಡೌನ್ ಪರಿಣಾಮದಿಂದಾಗಿ ಹೂಗಳನ್ನು ಕಟಾವು ಮಾಡಲು ಕೂಲಿ ಆಳುಗಳು ಸಿಗುವುದು ಕಷ್ಟವಾಗಿದೆ. ಇನ್ನು ಹೇಗೋ ಕಟಾವು ಮಾಡಿ ಅದನ್ನು ಮಾರುಕಟ್ಟೆಗೆ ಸಾಗಿಸುವ ಎಂದರೆ ಅಲ್ಲಿ ಕೇಳುವವರೇ ಇಲ್ಲ. ಸುಮಾರು ಎಂಬತ್ತು ಸಾವಿರ ರೂಪಾಯಿ ಹೂ ಮಣ್ಣುಪಾಲಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ರೈತ ಮಲ್ಲಿಕಾರ್ಜುನಯ್ಯ ಕೂಡ ತಮ್ಮ ನೋವು ತೋಡಿಕೊಂಡಿದ್ದು, ಹಬ್ಬಗಳಿಗೆ ಪ್ರತಿ ಕೆ.ಜಿ.ಗೆ 200ರಿಂದ 300ರಂತೆ ಮಾರಾಟವಾಗುತ್ತಿದ್ದ ಗುಲಾಬಿಯನ್ನು ಈಗ ಯಾರೂ ಕೇಳುವವರೇ ಇಲ್ಲ. ಒಂದು ವಾರದಿಂದ ಹೂ ಬಿಡಿಸುವ ವೆಚ್ಚ ಭರಿಸಲು ಸಾಧ್ಯವಾಗದೇ ತೋಟಗಳಲ್ಲೇ ಹೂವುಗಳು ಒಣಗುತ್ತಿವೆ ಎಂದರು.