ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ ಮುಂದುವರೆದಿರುವ ಸಂದರ್ಭದಲ್ಲೇ ರಾಜ್ಯದಲ್ಲೂ ನಾಯಕರು ಒಬ್ಬರ ನಂತರ ಒಬ್ಬರು ರಾಜೀನಾಮೆಗೆ ಮುಂದಾಗುತ್ತಿದ್ದಾರೆ.
ಪಕ್ಷದ ರಾಷ್ಟ್ರೀಯ ನಾಯಕರು ಗಾಂಧಿ ಕುಟುಂಬದ ಮೇಲೆ ಮುನಿಸಿಕೊಂಡು ಸರಣಿ ರೂಪದಲ್ಲಿ ರಾಜೀನಾಮೆ ನೀಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಇರುವಾಗಲೇ ರಾಜ್ಯ ಕಾಂಗ್ರೆಸ್ಗೂ ರಾಜೀನಾಮೆಯ ಬಿಸಿ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ಸಿ ಎಂ.ಡಿ. ಲಕ್ಷ್ಮೀನಾರಾಯಣ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯದಲ್ಲೇ ಅವರು ಬಿಜೆಪಿ ಸೇರಲಿದ್ದು, ಈ ಸಂಬಂಧ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ತಮಗೆ ಯಾವುದೇ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಆರೋಪಿಸಿ ಲಕ್ಷ್ಮೀನಾರಾಯಣ ರಾಜ್ಯ ನಾಯಕರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇದು ಶಿಸ್ತು ಸಮಿತಿ ಕೆಂಗಣ್ಣಿಗೆ ಗುರಿಯಾಗಿ ನೋಟಿಸ್ ಪಡೆದಿದ್ದರು. ಇದರಿಂದ ಬೇಸರಗೊಂಡು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
![ಮಾಜಿ ಎಂಎಲ್ಸಿ ಎಂ.ಡಿ.ಲಕ್ಷ್ಮೀನಾರಾಯಣ](https://etvbharatimages.akamaized.net/etvbharat/prod-images/16255151_thu2222.jpg)
ಇದನ್ನೂ ಓದಿ: ಎಂಎಲ್ಸಿ ಆಯ್ಕೆ ವಿಚಾರದಲ್ಲಿ ಸ್ಥಾನ ವಂಚಿತರ ಅಸಮಾಧಾನ ಮುಂದುವರಿಕೆ ; ಡಿಕೆಶಿಗೆ ಲಕ್ಷ್ಮಿನಾರಾಯಣ ಪತ್ರ
ಶಮನವಾಗದ ಮುನಿಯಪ್ಪ ಮುನಿಸು?: ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪಕ್ಷದ ರಾಜ್ಯ ನಾಯಕರ ನಡೆಗೆ ಬೇಸರಗೊಂಡಿದ್ದಾರೆ. ತಮ್ಮ ಜಿಲ್ಲೆಯಲ್ಲಿ ಬೇರೆ ಪಕ್ಷದ ನಾಯಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದು ಕೋಪ ಅವರಲ್ಲಿದೆ. ಹೀಗಾಗಿ ಸಹ ಪಕ್ಷ ಬಿಡಲು ಚಿಂತನೆ ನಡೆಸಿದ್ದು, ಬೆಂಬಲಿಗರ ಸಭೆ ಸಹ ನಡೆಸಿದ್ದಾರೆ.
![HK Muniyappa](https://etvbharatimages.akamaized.net/etvbharat/prod-images/16255151_thumb22222.jpg)
ಈ ಮಧ್ಯೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನ ಸಂಜಯ ನಗರದಲ್ಲಿರುವ ಕೆ ಎಚ್ ಮುನಿಯಪ್ಪ ಅವರ ನಿವಾಸಕ್ಕೆ ತೆರಳಿ ಮನವೊಲಿಸುವ ಯತ್ನ ಮಾಡಿದ್ದರು. ಅದರ ಫಲ ಕೊಟ್ಟಿದೆ ಎಂದು ಸುರ್ಜೇವಾಲಾ ಹೇಳಿಕೊಂಡಿದ್ದಾರೆ. ಆದರೆ, ಏನಾಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಮುನಿಯಪ್ಪ ನಿವಾಸಕ್ಕೆ ಸುರ್ಜೇವಾಲಾ ಭೇಟಿ.. ಮುನಿಸು ಶಮನಕ್ಕೆ ಯತ್ನ
ಸೀತಾರಾಂ ಮತ್ತು ರಕ್ಷಾ ರಾಮಯ್ಯ ನಡೆ ನಿಗೂಢ: ಈ ಮಧ್ಯೆ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಅವರ ಪುತ್ರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಕಾಂಗ್ರೆಸ್ ಬಿಡುವ ಯೋಚನೆ ಮಾಡಿ ದೊಡ್ಡ ಸಭೆಯನ್ನು ಬೆಂಗಳೂರಲ್ಲಿ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರನ್ನೂ ಕರೆಸಿ ಮನವೊಲಿಸುವ ಯತ್ನ ಮಾಡಿದ್ದರು. ಆದರೆ, ಸಫಲತೆ ಸಿಕ್ಕ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಅಪ್ಪ- ಮಗ ಇಬ್ಬರೂ ಬಿಜೆಪಿಯತ್ತ ಮುಖ ಮಾಡಿದ್ದು, ಸೀತಾರಾಂ ಚಿಕ್ಕಬಳ್ಳಾಪುರದಿಂದ ಲೋಕಸಭೆ ಮತ್ತು ರಕ್ಷಾ ರಾಮಯ್ಯ ಬಾಗೇಪಲ್ಲಿಯಿಂದ ವಿಧಾನಸಭೆಗೆ ಸ್ಪರ್ಧಿಸುವುದು ಪಕ್ಕಾ ಅನ್ನುವ ಮಾತುಗಳು ಕೇಳಿಬಂದಿದ್ದವು.
![MR Sitaram and Raksha Ramaiah](https://etvbharatimages.akamaized.net/etvbharat/prod-images/16255151_thum22.jpg)
ಕೈ ಬಿಡ್ತಾರಾ ಕೆಜಿಎಫ್ ಬಾಬು?: ಈ ಎಲ್ಲ ಅಸಮಾಧಾನಗಳ ಮಧ್ಯ ವಿಧಾನ ಪರಿಷತ್ಗೆ ಬೆಂಗಳೂರಿನಿಂದ ಸ್ಪರ್ಧಿಸಿದ್ದ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಸಹ ಚಿಕ್ಕಪೇಟೆಯಿಂದ ವಿಧಾನಸಭೆ ಟಿಕೆಟ್ ಕೇಳುತ್ತಿದ್ದಾರೆ. ವಿವಿಧ ಹಂತದಲ್ಲಿ ಪ್ರಯತ್ನಿಸುತ್ತಿರುವ ಇವರು ಕಾರ್ಯಕ್ರಮಗಳನ್ನೂ ಕೂಡ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ, ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಕೆಜಿಎಫ್ ಬಾಬು ಕೈ ಬಿಡ್ತಾರಾ ಅನ್ನುವ ಅನುಮಾನ ಮೂಡಿಸಿದೆ.
![KGF babu](https://etvbharatimages.akamaized.net/etvbharat/prod-images/16255151_thumb22.jpg)
ಇದನ್ನೂ ಓದಿ: ಡಾ ವೈ ರಾಮಪ್ಪ ಉಚ್ಛಾಟನೆ, ಕೆಜಿಎಫ್ ಬಾಬುಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್
ಮುದ್ದಹನುಮೇಗೌಡ ಕಾಂಗ್ರೆಸ್ಗೆ ಗುಡ್ ಬೈ?: ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ತ್ಯಜಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಇಲ್ಲವೇ ಬೇರೆ ಪಕ್ಷದತ್ತ ಇವರು ಮುಖ ಮಾಡಿದ್ದಾರೆ. ಸಂಸದರಾಗಿರುವ ಜಿ.ಎಸ್. ಬಸವರಾಜು ವಯಸ್ಸಿನ ಕಾರಣ ನೀಡಿ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಹುಡುಕಾಟದಲ್ಲಿದ್ದು, ಮುದ್ದಹನುಮೇಗೌಡ ಕಮಲ ನಾಯಕರ ಜೊತೆ ಸಮಾಲೋಚಿಸಿದ್ದಾರೆ.
ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸುವ ಮುನ್ನವೇ ಕಾಂಗ್ರೆಸ್ ನಾಯಕರು ಬಂಡಾಯ ಯಾತ್ರೆ ಆರಂಭಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಪಕ್ಷ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದಿಗ್ವಿಜಯ್ ಸಿಂಗ್.. 'ಭಾರತ ಜೋಡೋ' ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಭಾಗಿ