ಬೆಂಗಳೂರು: ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆ ಜೊತೆಗೆ ರೋಡ್ ಶೋ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ನಾನು ರಾಜ್ಯಾದ್ಯಂತ ಸುತ್ತಾಡಿದ್ದೇನೆ, ಈ ಬಾರಿ ಬಿಜೆಪಿಯ ಸುನಾಮಿ ಎಲ್ಲ ಕ್ಷೇತ್ರಗಳಲ್ಲಿ ಇದೆ. ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಲ್ಲಿದ್ದು, ನಮ್ಮ ಪಕ್ಷದಿಂದ ಟಿಕೆಟ್ ಸಿಗದವರನ್ನು ಪಕ್ಷಕ್ಕೆ ಸೇರಿಸಿಕೊಂಡು ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಬೀಗುತ್ತಿದೆ. ಬಿಜೆಪಿ ತಳ ಮಟ್ಟದಲ್ಲಿ ಗಟ್ಟಿಯಾಗಿದೆ ಎಂದು ಕಾಂಗ್ರೆಸ್ಗೆ ತಿರುಗೇಟು ಕೊಟ್ಟರು.
ದೇಶದ ಯಾವುದೇ ಶಕ್ತಿಯಿಂದ ಬಿಜೆಪಿ ಅಧಿಕಾರಕ್ಕೆ ಬರಲು, ಸರ್ಕಾರ ನಡೆಸಲು, ಜನರ ಕಲ್ಯಾಣ ಕೆಲಸ ಮಾಡವುದನ್ನು ತಡೆಯಲು ಸಾಧ್ಯವಿಲ್ಲ. ನಾವು ಎಲ್ಲ ವರ್ಗಗಳ ಹಿತರಕ್ಷಣೆ ಮಾಡುವಂತ ಸರ್ಕಾರವನ್ನು ಕೊಟ್ಟಿದ್ದೇವೆ. ಬಿಜೆಪಿ ದೊಡ್ಡಬಳ್ಳಾಪುರದ ಸಮಗ್ರ ಅಭಿವೃದ್ದಿಗೆ ಕಂಕಣಬದ್ಧವಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಬೇಕೆಂದಿರುವ ಉತ್ಸಾಹಿ ಯುವ ಅಭ್ಯರ್ಥಿ ಧೀರಜ್ ಮುನಿರಾಜ್ ಅವರಿಗೆ ದೊಡ್ಡ ಮನಸ್ಸಿನ ದೊಡ್ಡಬಳ್ಳಾಪುರದ ಜನತೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಸಿಎಂ ಮನವಿ ಮಾಡಿದರು.
ನೇಕಾರರ ವಿದ್ಯುತ್ ಸಬ್ಸಿಡಿಯನ್ನು ಸರ್ಕಾರವೇ ಭರಿಸಲಿದೆ, ಬೆಂಗಳೂರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಮಾಡಲು ಯೋಜನೆ ಮಾಡಲಾಗಿದೆ ಎಂದರು. ನೇಕಾರ ಸಮ್ಮಾನ್ ಯೋಜನೆ ಪ್ರಾರಂಭ ಮಾಡಿದ್ದು ನಮ್ಮ ನಾಯಕರಾದ ಯಡಿಯೂರಪ್ಪನವರು. ಪ್ರತಿಯೊಬ್ಬ ನೇಕಾರನಿಗೆ 2 ಸಾವಿರ ಕೊಡುತ್ತಿದ್ದರು, ನಾನು ಅಧಿಕಾರಕ್ಕೆ ಬಂದ ಮೇಲೆ ಅದನ್ನು 5 ಸಾವಿರಕ್ಕೆ ಏರಿಕೆ ಮಾಡಿದೆ. ಕೈಮಗ್ಗ ನೇಕಾರರಿಗೆ ಇದ್ದ ಯೋಜನೆಯನ್ನು ಪವರ್ ಲೂಮ್ಸ್ ಯೋಜನೆಗೂ ವಿಸ್ತರಿಸಿದ್ದು ನಮ್ಮ ಸರ್ಕಾರ. 1.10 ಲಕ್ಷ ಪವರ್ ಲೂಮ್ಸ್ ನೇಕಾರರಿಗೆ ಹಣ ಸಹಾಯ ಮಾಡಿದ್ದೂ ನಮ್ಮ ಸರ್ಕಾರ. ಶೂನ್ಯ ಬಡ್ಡಿಯ ಸಾಲ 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದೂ ನಮ್ಮ ಬಿಜೆಪಿಯ ಸರ್ಕಾರ. ಅ ಎಲ್ಲ ಬಡ್ಡಿಯನ್ನು ನಮ್ಮ ಸರ್ಕಾರ ತೀರಿಸುತ್ತದೆ ಎಂದು ಅಭಯ ನೀಡಿದರು.
ನೇಕಾರರಿಗೆ ಸಬ್ಸಿಡಿಯನ್ನು ಕೊಡುತ್ತಿದೆ. ನೇಕಾರರ ವಿದ್ಯುತ್ ಶಕ್ತಿ ಡೆಪಾಸಿಟ್ನ 50% ನಮ್ಮ ಸರ್ಕಾರ ಕೊಡುತ್ತಿದೆ. ನೇಕಾರ ಅಭಿವೃದ್ದಿ ನಿಗಮ ಮಾಡಿದೆ. ಬೆಂಗಳೂರಿಗೆ ಹೂ ಹಣ್ಣು ಸರಬರಾಜು ಮಾಡುವ ತಿಗಳರಿಗೆ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ಮೊದಲ ಬಾರಿ ನಮ್ಮ ಸರ್ಕಾರ ಮಾಡಿದೆ. ಅದೇ ರೀತಿ ಗಾಣಿಗರಿಗೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಕಾಯಕ ಕುಲಗಳಿಗೆ ಅಭಿವೃದ್ಧಿ ನಿಗಮ ಮಾಡುವುದು ನಮ್ಮ ಕರ್ತವ್ಯ. ತಳ ಸಮುದಾಯವನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಬೆಂಗಳೂರಿನ ಎಲ್ಲಾ ವ್ಯವಸ್ಥೆ ದೊಡ್ಡಬಳ್ಳಾಪುರದಲ್ಲಿ ಸಿಗಲಿದೆ ಎಂದರು.
ನಗರದ ನೆಲದಾಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು, ಸಚಿವ ಡಾ. ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ:ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ