ನೆಲಮಂಗಲ(ಬೆಂಗಳೂರು) : ಹಿರಿಯ ನಟಿ ಲೀಲಾವತಿ ಅವರ ಕುಟುಂಬದಿಂದ ಸೋಲದೇವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಡಾ. ಎಂ. ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿತ್ರ ಜಗತ್ತಿನ ಎವರ್‌ಗ್ರೀನ್ ಸ್ಟಾರ್ ಲೀಲಾವತಿಯವರು. ಸೋಲದೇವನಹಳ್ಳಿಯಂಥ ಪುಣ್ಯಭೂಮಿಯಲ್ಲಿ ನೆಲೆಸಿರುವ ಲೀಲಾವತಿಯವರೇ ಧನ್ಯರು. ಎಲ್ಲಿ ಪುಣ್ಯಭೂಮಿ, ನಿಸರ್ಗ ಸಂಪತ್ತು, ಒಳ್ಳೆತನ ಇರುತ್ತೋ ಅಲ್ಲಿ ದೇವರ ಶಕ್ತಿ ಇರುತ್ತದೆ. ಈ ಎಲ್ಲ ಶಕ್ತಿಗಳ ಸಂಗಮ ಸೋಲದೇವನಹಳ್ಳಿ ಎಂದು ಬಣ್ಣಿಸಿದರು.
ಅಕ್ಕ ಲೀಲಕ್ಕ, ಎಲ್ಲರಿಗೂ ಅಕ್ಕ. ಲೀಲಾವತಿಯವರ ಚಲನಚಿತ್ರ ನೋಡದೇ ಇರುವವರು ಕರ್ನಾಟಕದಲ್ಲಿ ಯಾರು ಇಲ್ಲ ಎಂಬುದು ನನ್ನ ಭಾವನೆ. ಚಲನಚಿತ್ರದಲ್ಲಿ ತಾರೆಯಾಗಿ ಬಹುದಿನ ಉಳಿಯೋದು ಬಹಳ ಕಷ್ಟ. ಅಂತಹದರಲ್ಲಿ ಲೀಲಾವತಿಯವರು ದಶಕಗಳ ಕಾಲ ಚಿತ್ರರಂಗ ಆಳಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸವಾಲುಗಳನ್ನ ಎದುರಿಸಿ ಮೆಟ್ಟಿ ನಿಂತಿರುವ ಅಕ್ಕ ಲೀಲಕ್ಕ. ಆರ್‌ಎಂವಿ ಲೇಔಟ್ ತೊರೆದು ಬಂದು ಸ್ವಚ್ಚ ಪರಿಸರದಲ್ಲಿ ಇದ್ದಾರೆ. ಲೀಲಾವತಿ ಅವರು ಇಲ್ಲಿಗೆ ಬಂದಾಗ ನೆಲ ಸಮತಟ್ಟು ಇರಲಿಲ್ಲ, ಈಗ ತೋಟ ಮಾಡಿದ್ದಾರೆ. ನೆಲ ಸಮತಟ್ಟು ಇಲ್ಲದಿದ್ದರೇನು? ಮನಸು ಸಮತಟ್ಟು ಇರಬೇಕು ಎಂದರು.
ಲೀಲಾವತಿ ಅಕ್ಕನವರು ತಾವು ಚಿತ್ರರಂಗಕ್ಕೆ ಬಂದಗಾ ಬ್ಯೂಟಿ ಕ್ವೀನ್ ಆಗಿದ್ದರು. ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಇನ್ನೂ ಕೆಲವರು ಇದ್ದಾರೆ, ಅವರನ್ನ ಕಳುಹಿಸಿ ನಾನು ಹೋಗುತ್ತೇನೆ, ಸೆಂಚುರಿ ಮಾಡಿ ಹೋಗುತ್ತೇನೆ ಅಂತಾರೆ ಲೀಲಕ್ಕ. ನಿಮಗೆ ಇಷ್ಟೆಲ್ಲ ಅಂದ ಚಂದ ಇದೆ, ಅದಕ್ಕೂ ದೊಡ್ಡದು ನಿನ್ನ ಹೃದಯ ವೈಶಾಲ್ಯ ಎಂದು ಶ್ಲಾಘಿಸಿದರು.
ಸೌಕರ್ಯ ಸೌಲಭ್ಯ ಸರ್ಕಾರ ಕೊಡಲಿದೆ: ನಿಮ್ಮ ಮನಸ್ಸು ಎಷ್ಟು ದೊಡ್ಡದಿರಬಹುದು ಎಂಬುದು ನೀನು ಕಟ್ಟಿಕೊಟ್ಟಿರುವ ಆಸ್ಪತ್ರೆಯಿಂದ ಗೊತ್ತಾಗುತ್ತದೆ. ನಿಮ್ಮ ಹೃದಯ ಶ್ರೀಮಂತಿಕೆ ಮುಂದೆ ನಾವೆಲ್ಲ ಎಷ್ಟು ಸಣ್ಣವರು ಅನ್ನುವುದನ್ನು ನೀವು ತೋರಿಸಿಕೊಟ್ಟಿದ್ದೀರಿ ಎಂದರು. ಸರ್ಕಾರಗಳು ಮಾಡುವ ಕೆಲಸವನ್ನು ಇಂದು ನೀವು ಮಾಡಿದ್ದೀರಿ. ಇದರ ಉದ್ಘಾಟನೆಗೆ ಬರದಿದ್ದರೆ ನಮ್ಮ ಹುದ್ದೆಗೆ ಚ್ಯುತಿ ಬರುತ್ತಿತ್ತು. ಈ ಆಸ್ಪತ್ರೆಗೆ ಯಾವ್ಯಾವ ಸೌಕರ್ಯಗಳು, ಸೌಲಭ್ಯಗಳು, ಸಿಬ್ಬಂದಿ ಬೇಕೋ ಅದನ್ನ ಸರ್ಕಾರ ಕೊಡಲಿದೆ ಎಂದು ಭರವಸೆ ನೀಡಿದರು.
ಪಶು ಆಸ್ಪತ್ರೆ ಮಂಜೂರು: ಜನರಿಗೆ ಆಸ್ಪತ್ರೆ ಆಯ್ತು, ದನಕರುಗಳಿಗೆ ಆಸ್ಪತ್ರೆ ಬೇಕು ಎಂದು ಲೀಲಾವತಿ ಮನವಿ ಮಾಡಿದ್ದಾರೆ. ನೀವು ಒಪ್ಪಿಗೆ ಕೊಟ್ರೆ ನಾವೇ ಕಟ್ಟಡ ಕಟ್ಟಿಸಿ ಕೊಡುತ್ತೇವೆ. ನೀವು ಮಂಜೂರು ಮಾಡಿ ಎಂದಿದ್ದಾರೆ. ನಾವು ಇಲ್ಲಿ ಖಂಡಿತವಾಗಿಯೂ ಒಂದು ಪಶು ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು ಹೇಳಿದರು. ಆಸ್ಪತ್ರೆ ಕಟ್ಟಡದ ದಾಖಲೆಗಳನ್ನು ವಿನೋದ್ ರಾಜ್ ಅವರು ಸರ್ಕಾರಕ್ಕೆ ಹಸ್ತಾಂತರಿಸಿದರು.
ಓದಿ: ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕ ಶೀಘ್ರ ಸೇರ್ಪಡೆ: ಸಿಎಂ ಬೊಮ್ಮಾಯಿ