ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಹೋಮ್ ವರ್ಕ್ ಮಾಡದಿರುವುದಕ್ಕೆ ಪೋಷಕರು ಬೈದರೆಂದು ನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಅತ್ತಿಬೆಲೆಯಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.
ಹೊಸಕೋಟೆ ಸಿಟಿಜನ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಯಶಸ್ ಗೌಡ (13) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ. ಮಂಗಳವಾರ ಸಂಜೆ ಶಾಲೆ ಮುಗಿಸಿಕೊಂಡು ಬಂದಿದ್ದ ಈತ ಹೋಮ್ ವರ್ಕ್ ಮಾಡದೇ ಆಟ ಆಡಿಕೊಂಡಿದ್ದ. ಇದನ್ನು ಗಮನಿಸಿದ ಪೋಷಕರು ಬರೆದುಕೊಳ್ಳುವಂತೆ ಬೈದಿದ್ದರು ಎನ್ನಲಾಗಿದೆ.
ಇಷ್ಟಕ್ಕೇ ಮನನೊಂದ ಬಾಲಕ ಮನೆಯ ಸ್ಟೋರ್ ರೂಮಿನಲ್ಲಿ ಪ್ಲಾಸ್ಟಿಕ್ ಹಗ್ಗನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಸೂಲಿಬೆಲೆ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ: ಆನ್ಲೈನ್ ಗೇಮಿಂಗ್ ಕಾರಣವೇ?