ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಮನೆಯೊಂದರ ಬಾಗಿಲು ಮುರಿದು ಮಾಂಗಲ್ಯ ಸರ ಕದ್ದು ಮಣ್ಣಿನಲ್ಲಿ ಬಚ್ಚಿಟ್ಟಿದ್ದ. ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಮಾಂಗಲ್ಯ ಸರವನ್ನ ಮಹಿಳೆಗೆ ಹಿಂದಿರುಗಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಕ್ರಾಸ್ ಬಳಿಯ ತೋಟದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಮಾಗಡಿ ತಾಲೂಕಿನ ಕುದುರೆಗೆರೆ ಗ್ರಾಮದ ವೆಂಕಟೇಶ್ (41) ಬಂಧಿತ ಆರೋಪಿ. ಲಗುಮೇನಹಳ್ಳಿ ಕ್ರಾಸ್ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ತೋಟದ ಸಮೀಪದಲ್ಲಿರುವ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಕಳವು ಮಾಡಿ, ತೋಟದಲ್ಲಿನ ಮಣ್ಣಿನ ಗುಡ್ಡೆಯಲ್ಲಿ ಟವೆಲ್ನಲ್ಲಿ ಬಚ್ಚಿಟ್ಟಿದ್ದ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರು ಬಂದ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸರು ಮನೆಯ ಆಸುಪಾಸಿವರ ಬಳಿ ವಿಚಾರಣೆ ನಡೆಸಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದವರ ವಿಚಾರಣೆ ನಡೆಸುವಾಗ ವೆಂಕಟೇಶ್ ಅನುಮಾನಸ್ಪದವಾಗಿ ವರ್ತಿಸಿದ್ದಾನೆ. ಹಾಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಂಗಲ್ಯ ಸರ ಕದ್ದು, ಮಣ್ಣಿನ ಗುಡ್ಡೆಯಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಪೊಲೀಸರು ಆರೋಪಿ ಜತೆ ಸ್ಥಳಕ್ಕೆ ತೆರಳಿ ಬಚ್ಚಿಟ್ಟಿದ್ದ ಮಾಂಗ್ಯಲ್ಯ ಸರವನ್ನು ವಶಕ್ಕೆ ಪಡೆದು, ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.