ಬೆಂಗಳೂರು: ಸಿಇಟಿ ಆನ್ಲೈನ್ ಅರ್ಜಿ ತುಂಬುವಾಗ ಆಗುವ ತಪ್ಪುಗಳನ್ನು ನಿವಾರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏರ್ಪಡಿಸಿದ್ದ ಸಿಇಟಿ ವಿದ್ಯಾರ್ಥಿಮಿತ್ರ ಮಾಸ್ಟರ್ ಟೈನರ್ ತರಬೇತಿ ಕಾರ್ಯಕ್ರಮ ಗುರುವಾರ ಇಲ್ಲಿನ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ 250ಕ್ಕೂ ಹೆಚ್ಚು ಪಿಯು ವಿಜ್ಞಾನ ಉಪನ್ಯಾಸಕರಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ಮಾಸ್ಟರ್ ಟ್ರೈನರ್ ತರಬೇತಿ ಪಡೆದವರು ಮುಂದಿನ ಹಂತದಲ್ಲಿ ತಮ್ಮ ಜಿಲ್ಲೆಯಲ್ಲಿ ಪ್ರತಿ ಪಿಯು ವಿಜ್ಞಾನ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಅರ್ಜಿ ತುಂಬುವ ಸರಿಯಾದ ವಿಧಾನದ ಬಗ್ಗೆ ತರಬೇತಿ ನೀಡುತ್ತಾರೆ. ನಂತರ ಆ ಉಪನ್ಯಾಸಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಜನವರಿ 10ಕ್ಕೆ ಮುನ್ನ ಈ ಪ್ರಕ್ರಿಯೆ ಮುಗಿಸುವ ಕಾಲಮಿತಿ ಹಾಕಿಕೊಳ್ಳಲಾಗಿದೆ. ಆ ಪ್ರಕಾರ ಎಲ್ಲರೂ ಕೆಲಸ ಮಾಡಬೇಕು ಎಂದು ಸೂಚಿಸಿದರು.
ರಾಜ್ಯ ಪಠ್ಯಕ್ರಮದ ಪಿಯು ಕಾಲೇಜುಗಳು ಅಲ್ಲದೆ, ತಮ್ಮ ಜಿಲ್ಲೆಗಳಲ್ಲಿನ ಸಿಬಿಎಸ್ಇ, ಐಸಿಎಸ್ಸಿಇ, ಐಜಿಎಸ್ಸಿ ಪಿಯು ಕಾಲೇಜುಗಳಲ್ಲಿನ ಉಪನ್ಯಾಸಕರಿಗೂ ತರಬೇತಿ ಕೊಡಬೇಕು ಎಂದು ಮಾಸ್ಟರ್ ಟ್ರೈನರ್ಗಳಿಗೆ ರಮ್ಯಾ ಸೂಚಿಸಿದರು.
ಅಭ್ಯರ್ಥಿಗಳು ತಮ್ಮ ಹೆಸರು, ಆರ್ ಡಿ ಸಂಖ್ಯೆ, ಪ್ರವರ್ಗ, ಜಾತಿ ನಮೂದಿಸುವಾಗ ಮಾಡುವ ತಪ್ಪುಗಳು ಸೇರಿದಂತೆ ಇನ್ನಿತರ ದೋಷಗಳಿಗೆ ಕಡಿವಾಣ ಹಾಕುವುದು ಈ ತರಬೇತಿ ಕಾರ್ಯಕ್ರಮದ ಉದ್ದೇಶವಾಗಿದೆ. ಅರ್ಜಿ ತುಂಬುವ ಹಂತದಲ್ಲಿ ತಪ್ಪುಗಳನ್ನು ತಡೆದರೆ ಸಿಇಟಿ ಪ್ರಕ್ರಿಯೆ ಕೂಡ ವೇಗ ಪಡೆಯುತ್ತದೆ. ಜೊತೆಗೆ, ಪ್ರಮಾದದ ಕಾರಣಕ್ಕಾಗಿ ಅಭ್ಯರ್ಥಿಗಳಿಗೆ ತಮ್ಮ ಇಚ್ಛೆಯ ಕೋರ್ಸ್ಗಳಿಗೆ ಸೀಟು ಕೈತಪ್ಪುವ ಸಾಧ್ಯತೆಯೂ ನಿವಾರಣೆಯಾಗುತ್ತದೆ ಎಂದು ಎಸ್. ರಮ್ಯಾ ವಿವರಿಸಿದ್ದಾರೆ. ಕೆಇಎ ಆಡಳಿತಾಧಿಕಾರಿ ಡಾ. ರೂಪಾಶ್ರೀ ಇದ್ದರು.
ಸಿಇಟಿ ಪರೀಕ್ಷಾ ದಿನಾಂಕ ಪ್ರಕಟ: ಸಿಇಟಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದೆ. ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ 2024-25 ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಮುಂಬರುವ ಏಪ್ರಿಲ್ 20 (ಶನಿವಾರ) ಮತ್ತು 21ರಂದು (ಭಾನುವಾರ) ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಏ.20 ರ ಬೆಳಗ್ಗೆ 10.30 ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ ಗಣಿತ, 21 ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19 ರ ಶುಕ್ರವಾರದಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಜನವರಿ 10 ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ಸಿಇಟಿಗೆ ಆನ್ಲೈನ್ ಅರ್ಜಿ ತುಂಬುವಾಗ ತಪ್ಪುಗಳ ನಿವಾರಣೆಗೆ ಮಾಸ್ಟರ್ ಟ್ರೈನರ್ ತರಬೇತಿ