ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ದಿನೇ ದಿನೆ ತೀವ್ರಗೊಳ್ಳುತ್ತಿದೆ. ಈ ನಡುವೆ ಭದ್ರತೆಯ ಸಲುವಾಗಿ ಸಿಸಿಟಿವಿ ಅಳವಡಿಸಲು ಮುಂದಾದ ಕ್ರಮವನ್ನು ಖಂಡಿಸಿ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ. ಹಿಂದೂಪರ ಸಂಘಟನೆಗಳಿಂದ ಮೈದಾನ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೊಂದೆಡೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಅಹಿತಕರ ಘಟನೆಗಳು ನಡೆಯುವ ಕಾರಣದಿಂದಾಗಿ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮೈದಾನ ಸುತ್ತಲೂ ಸಿಸಿಟಿವಿ ಅಳವಡಿಕೆಗೆ ನಿರ್ಧಾರ ಕೈಗೊಂಡಿತ್ತು. ಅದರಂತೆ ಶನಿವಾರ ಮೈದಾನದಲ್ಲಿ ಸಿಸಿಟಿವಿ ಕಂಬಗಳನ್ನು ಅಳವಡಿಸಲು ಜೆಸಿಬಿ ಮೂಲಕ ಹಳ್ಳ ತೋಡಲು ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಥಳೀಯರು ಹಾಗೂ ಮಾಜಿ ಬಿಬಿಎಂಪಿ ಸದಸ್ಯ ಬಿ.ವಿ. ಗಣೇಶ್, ಯಾರ ಅನುಮತಿ ಪಡೆದು ಗುಂಡಿ ತೋಡಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಮುಂಜಾಗ್ರತಾ ಕ್ರಮಕ್ಕೆ ಸಿಸಿಟಿವಿ ಅಳವಡಿಕೆ : ಮುಂಜಾಗ್ರತಾ ಕ್ರಮಕ್ಕೆ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಹೇಳಿದ್ದಾರೆ. ಇದಕ್ಕೆ ಒಪ್ಪದ ಸ್ಥಳೀಯರು, ರಾಜಕೀಯ ಮುಖಂಡರು, ಇಷ್ಟು ದಿನ ಇಲ್ಲದ ಸಿಸಿ ಕ್ಯಾಮರಾ ಈಗ ಯಾಕೆ? ಮುಸ್ಲಿಂರ ರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಿದ್ದಾರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಸ್ಪಷ್ಟನೆಗೆ ಜಗ್ಗದ ಜನ : ಬಿಬಿಎಂಪಿಯ ಕಾಮಗಾರಿ ಅಲ್ಲ. ಆದರೆ, ಭದ್ರತೆ ಸಂಬಂಧ ನಾವು ಸಿಸಿಟಿವಿ ಹಾಕಿಸುತ್ತೇನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದು, ಸುಮ್ಮನಾಗದ ಸ್ಥಳೀಯರು ಇಲ್ಲಿ ಮಕ್ಕಳು ಆಟ ಆಡಲು ಭಯಪಡುತ್ತಾರೆ. ಮೈದಾನದಲ್ಲಿ ಯಾವುದೇ ಒಂದು ವಾಹನವನ್ನೂ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಆಟದ ಮೈದಾನ. ಐತಿಹಾಸಿಕ ಆಟದ ಮೈದಾನ. ಆದರೆ, ವಕ್ಫ್ ಬೋರ್ಡ್ ನಲ್ಲಿ ಈದ್ಗಾ ಮೈದಾನವೆಂದು ಇರಬಹುದು, ಅದು ನಮಗೆ ಗೊತ್ತಿಲ್ಲ. ನಾವು ಜೆಸಿಬಿ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ನಾವು ಸಿಸಿ ಕ್ಯಾಮರಾಗಳ ಅಳವಡಿಕೆಗೆ ಬಿಡಲ್ಲ ಎಂದು ಸ್ಥಳಿಯರು ಪಟ್ಟು ಹಿಡಿದರು.
ಈ ನಡುವೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು. ಪರಿಸ್ಥಿತಿ ಕೈಮೀರಿದಾಗ ಸ್ಥಳೀಯರನ್ನು ಸ್ಥಳದಿಂದ ಖಾಲಿ ಮಾಡಿಸಲು ಪೊಲೀಸರು ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಅಭಿಯಂತರ ಉಮೇಶ್ ರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಬೈಕ್ ಹತ್ತಿ ಹೊರಟ ಎಇ ಉಮೇಶ್ ಸ್ಥಳೀಯರ ಪ್ರಶ್ನೆಗೆ ಉತ್ತರ ಕೊಡದೆ ಅಸಡ್ಡೆ ತೋರಿ ಹೊರಟು ಹೋದ ಪ್ರಸಂಗ ನಡೆಯಿತು.
ಎಲ್ಲೆಲ್ಲಿ, ಎಷ್ಟು ಸಿಸಿ ಕ್ಯಾಮರಾ ಅಳವಡಿಕೆ? : ವಿವಾದಿತ ಪ್ರದೇಶದ ಸುತ್ತಲೂ ಹನ್ನೆರಡು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯಾಮರಾಗಳು 4 ಎಂಪಿ ಜೂಮ್ ಮತ್ತು 4 ಕೆ ಸ್ಪಷ್ಟತೆ ವೈಶಿಷ್ಟ್ಯದೊಂದಿಗೆ ಇರಲಿದೆ. ಮೈದಾನದ ಆವರಣದಲ್ಲೇ ಮಾನಿಟರ್‌ಗೆ ಸಂಪರ್ಕ ಇರುತ್ತಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯು ಸಿಸಿಟಿವಿ ದೃಶ್ಯಗಳಿಗೆ ಪ್ರವೇಶವನ್ನು ಹೊಂದಿರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಓದಿ : ಬಿಜೆಪಿಯವರು ಕಳಿಸುವ ಬಳಸಿದ ಚಡ್ಡಿಗಳನ್ನು ನಾವು ಮೋದಿಗೆ ರವಾನಿಸುತ್ತೇವೆ: ಪ್ರಿಯಾಂಕ್ ಖರ್ಗೆ