ಆನೇಕಲ್: ಹೋಟೆಲ್ನಲ್ಲಿ ಊಟ ಮುಗಿಸಿ, ಬೇಗ ಮನೆಗೆ ಹೊರಡುವ ವೇಳೆ ರಾಂಗ್ ರೂಟ್ನಲ್ಲಿ ಬರುತ್ತಿದ್ದ ಕಾರೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮನೆಗೆ ಹೋಗುವ ಅವಸರದಲ್ಲಿ ರಾಂಗ್ ರೂಟ್ನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಈ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಉತ್ತರ ಪ್ರದೇಶ ಮೂಲದ 2 ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮತ್ತೊಂದು ಮಗು ಮತ್ತು ಇನ್ನೋರ್ವರು ಗಾಯಗೊಂಡಿದ್ದಾರೆ.
ಮೃತರನ್ನು ಅಂಜನಿ ಯಾದವ್ (29), ನೇಹಾ ಯಾದವ್ (28), ಸಂತೋಷ್ (30) ಮತ್ತು ದೃವ (2) ಎಂದು ಗುರುತಿಸಲಾಗಿದೆ. ಅಲ್ಲದೇ ಸಾನ್ವಿ ಎಂಬ 2 ವರ್ಷದ ಮಗು ಮತ್ತು ಮಗುವಿನ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ಮೃತ ಸಂತೋಷ್ ಕುಟುಂಬದ ಜೊತೆ ತನ್ನ ಸ್ನೇಹಿತನ ಕುಟುಂಬವನ್ನು ಕರೆದುಕೊಂಡು ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ತಡರಾತ್ರಿ ಸರ್ಜಾಪುರ ಬಳಿಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ನ ತಮ್ಮ ಫ್ಲ್ಯಾಟಿಗೆ ಹೊರಟಿದ್ದ ವೇಳೆ ಬುರಗುಂಟೆ ಬಳಿ ಯು ಟರ್ನ್ ತೆಗೆದುಕೊಂಡು ರಾಂಗ್ ರೂಟ್ನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಎದುರಿಗೆ ಬಂದ ಟಿಪ್ಪರ್ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.