ನೆಲಮಂಗಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪದ ದೇವಮಾಚೋಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆರೆಯ ಏರಿ ಮೇಲೆ ಕಾರು ವೇಗವಾಗಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆರೆಗೆ ಉರುಳಿದೆ. ಕೆರೆಯಲ್ಲಿ ನೀರಿದ್ದರಿಂದ ಕಾರಿನಲ್ಲಿದ್ದ ನಾಲ್ವರು ಹೊರ ಬರಲು ಸಾಧ್ಯವಾಗದೆ ಸಾವಿಗೀಡಾಗಿದ್ದಾರೆ. ಬೆಂಗಳೂರು ಮೂಲದ ಸುನೀಲ್, ಸಂತೋಷ್, ಮಂಜುನಾಥ್, ರಾಘವೇಂದ್ರ ಮೃತ ದುರ್ದೈವಿಗಳಾಗಿದ್ದು, ಬೆಂಗಳೂರಿನಿಂದ ಹುಲಿಯೂರುದುರ್ಗಕ್ಕೆ ಹೋಗುವ ವೇಳೆ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನ ನೆಲಮಂಗಲ ಮತ್ತು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.