ದೊಡ್ಡಬಳ್ಳಾಪುರ: ಮಿಣಿ ಮಿಣಿ ಪೌಡರ್ ವೈರಲ್ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೆಂಡಾಮಂಡಲರಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿಯವರ ವಾಗ್ದಾಳಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ನಗರಕ್ಕೆ ಆಗಮಿಸಿದ್ದ ವಿಜಯೇಂದ್ರ, ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಒಂದೂವರೆ ವರ್ಷದ ಸರ್ಕಾರದಿಂದ ಬೇಸತ್ತು ಆಡಳಿತ ಪಕ್ಷದ ಶಾಸಕರು ರಾಜೀನಾಮೆ ಕೊಟ್ಟು ಹೊರ ಬಂದು ಯಡಿಯೂರಪ್ಪ ನೇತೃತ್ವದಲ್ಲಿ ಸುಭದ್ರ ಸರ್ಕಾರ ರಚನೆ ಮಾಡಿದ್ದಾರೆ. ಸಂಪುಟ ವಿಸ್ತರಣೆಯ ಮೂಲಕ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುವ ವಿಶ್ವಾಸ ನನಗಿದೆ. ಸಂಪುಟ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಅವರು ತೀರ್ಮಾನ ತೆಗೆದುಕೊಳ್ಳಲಿದ್ದು, ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದರು.
ಅಲ್ಲದೇ ಇನ್ನೆರೆಡು ದಿನಗಳಲ್ಲಿ ಸಿಎಂ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರು. ಸೋತ ಎಂಟಿಬಿ ಮತ್ತು ವಿಶ್ವನಾಥ್ ಗೆ ಸಚಿವ ಸ್ಥಾನ ಕೊಡುವ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ರು.
ಇದೇ ವೇಳೆ ಮಿಣಿ ಮಿಣಿ ಪೌಡರ್ ವೈರಲ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಗೇಲಿ ಮಾಡಿದ್ದಾರೆಂದು ಹೆಚ್ಡಿಕೆ ಕೆಂಡಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು ಹೆಚ್..ಡಿ ಕುಮಾರಸ್ವಾಮಿ ಅನ್ನುವುದಕ್ಕಿಂತ ಮಿಣಿ ಮಿಣಿ ಕುಮಾರಸ್ವಾಮಿ ಅಂತಾನೇ ಅವ್ರು ಪ್ರಸಿದ್ಧರಾಗಿದ್ದಾರೆಂದು ಕಾಲೆಳೆದರು.