ಹೊಸಕೋಟೆ: ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪಟ್ಟಣದ ಹೊರವಲಯದ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಸುಜಿತ್ ಭೇಟಿ ನೀಡಿ ಪೂರ್ವಸಿದ್ದತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಮತದಾನ ನಡೆದ 286 ಮತಗಟ್ಟೆಗಳ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಎಣಿಕೆ ಕೇಂದ್ರದ 3 ಭದ್ರತಾ ಕೊಠಡಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಇರಿಸಲಾಗಿದೆ. ಕೌಂಟಿಂಗ್ ಬೆಳಿಗ್ಗೆ 8.00 ಗಂಟೆಗೆ ಅಂಚೆ ಮತ ಎಣಿಕೆಯೊಂದಿಗೆ ಪ್ರಾರಂಭವಾಗಲಿದೆ. ಒಟ್ಟು 21 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲ್ಲಿದ್ದು, 14 ಟೇಬಲ್‌ಗಳನ್ನು ಒದಗಿಸಲಾಗಿದೆ ಎಂದರು.
ಮತ ಎಣಿಕೆ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹೊಸಕೋಟೆ ತಾಲ್ಲೂಕು ಮತ್ತು ದೇವನಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿಯವರೆಗೆ ಮೆರವಣಿಗೆ, ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದು, ಸಿಡಿಮದ್ದು, ಪಟಾಕಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಿಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಸುಜಿತ್ ತಿಳಿಸಿದ್ದಾರೆ.