ದೇವನಹಳ್ಳಿ: ನೀವು ಅಭಿವೃದ್ಧಿಗೆ ಮತ ಕೊಡುತ್ತಿರೋ ಇಲ್ಲಾ ಕುಟುಂಬ ಪರಿವಾರ ಕೇಂದ್ರಿತವಾಗಿರುವ ಪಕ್ಷಗಳಿಗೆ ಮತ ಕೊಡುತ್ತಿರೋ ಯೋಚಿಸಿ. ಒಂದು ವೇಳೆ ನೀವು ಜೆಡಿಎಸ್ಗೆ ಮತ ನೀಡಿದ್ರೆ, ಅವರು ಭ್ರಷ್ಟ ಕಾಂಗ್ರೆಸ್ ಜೊತೆ ಸೇರುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ನವ ಬೆಂಗಳೂರು ನಿರ್ಮಾಣ ನಮ್ಮ ಸಂಕಲ್ಪವಾಗಿದೆ ಎಂದು ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ಘಾಟನೆ ಬಳಿಕ ಅಮಿತ್ ಶಾ ಮಾತನಾಡಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಧ್ಯನವಾದ ತಿಳಿಸುತ್ತೇನೆ. ದೇವನಹಳ್ಳಿಯ ಅವತಿ ಗ್ರಾಮದಲ್ಲಿ ಪ್ರಾರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬರುವುದಕ್ಕೆ ಕಾರಣವಾಗಲಿದೆ ಎಂದರು. ಅಮಿತ್ ಶಾ ಅವರಿಗೆ ಖಡ್ಗ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮಾತನಾಡಿದರು. ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ಕೈಗಾರಿಕಾ ಪಾರ್ಕ್, ಸಾಫ್ಟ್ ವೇರ್ ಪಾರ್ಕ್, ಸ್ಟಾರ್ಟ್ ಅಪ್ ಪಾರ್ಕ್ ದೇವನಹಳ್ಳಿಯ ಅಕ್ಕಪಕ್ಕದಲ್ಲಿ ಆಗುತ್ತಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ಅಭಿವೃದ್ಧಿ ಮಾಡಿ ನವ ಬೆಂಗಳೂರು ನಿರ್ಮಾಣ ಮಾಡಲಾಗುವುದು.
ಇಷ್ಟು ವರ್ಷ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಮೋಸ ಮಾಡಿದೆ. ನಿಜವಾದ ಅಭಿವೃದ್ಧಿ ಬಿಜೆಪಿ ಸರ್ಕಾರ ಮಾಡಿದೆ. ಬೆಂಗಳೂರು ಗ್ರಾಮೀಣ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವ ಗುರಿ ನಮ್ಮದು. ನಾನು ಈ ತಾಲೂಕುಗಳಿಗೆ ಪುನಃ ಭೇಟಿ ನೀಡಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಚಿಕ್ಕಬಳ್ಳಾಪುರ ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ ಅವರು ಈ ಜಿಲ್ಲೆಯ ನಾಲ್ಕೂ ಕ್ಚೇತ್ರಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು. ಕೆಂಪೇಗೌಡರ ಕನಸು ನನಸು ಮಾಡಲು ಭಾಜಪ ಗೆಲ್ಲಿಸಲೇಬೇಕೆಂದು ಕರೆ ನೀಡಿದರು. ಬಿಜೆಪಿಯ ನಿರಂತರ ವಿಜಯ ಪತಾಕೆಗೆ ಉತ್ತರ ಪೂರ್ವ ರಾಜ್ಯಗಳು ಸೇರಿವೆ. ಪ್ರಧಾನಿ ಹಾಗೂ ಅಮಿತ್ ಶಾ ಅವರ ಸಂಘಟನಾ ಶಕ್ತಿಗೆ ಉತ್ತರ ಪೂರ್ವದಲ್ಲಿ ಕೇಸರಿ ಮತ್ತು ಕಮಲ ಅರಳಿದೆ. ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ಎಲ್ಲ ಕಡೆ ಗೆಲ್ಲುತ್ತಿರುವ ಏಕೈಕೆ ಪಕ್ಷ ಬಿಜೆಪಿ ಎಂದರು.
ಭಾರತದ ಪಕ್ಷ ಬಿಜೆಪಿ: ಭಾರತದ ಪಕ್ಷ, ದೇಶದ ಪಕ್ಷವಾಗಿ ಭಾಜಪ ಹೊರಹೊಮ್ಮಿದೆ. ಕಾಂಗ್ರೆಸ್ ಈ ದೇಶದಲ್ಲಿ ಕೊನೆಯ ವಿಧಾನಸಭಾ ಚುನಾವಣೆಯನ್ನು ಕರ್ನಾಟಕದಲ್ಲಿ ಎದುರಿಸುತ್ತಿದೆ. ಎಲ್ಲಾ ಕಡೆಯಲ್ಲಿಯೂ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೋತರೆ ದೇಶಾದ್ಯಂತ ಬೇರು ಸಮೇತ ಕಿತ್ತು ಹಾಕಿದಂತಾಗಲಿದೆ. ಬ್ರಿಟೀಷ್ ವಂಶಾವಳಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ದೇಶ ಇಬ್ಬಾಗ ಮಾಡಿದ ಕಾಂಗ್ರೆಸ್: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ನಿಜವಾಗಿಯೂ ಭಾರತವನ್ನು ಇಬ್ಭಾಗವಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶವನ್ನು ಜೋಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.
ಮೋದಿ, ಅಮಿತ್ ಶಾ ದೇಶ ಒಗ್ಗೂಡಿಸಿದವರು: ಈ ದೇಶವನ್ನು ಒಗ್ಗೂಡಿಸಿದವರು ಮೋದಿ, ಅಮಿತ್ ಶಾ, ದೇಶದ ದೀನ ದಲಿತರು ಬಡವರಿಗೆ ಅನೇಕ ಯೊಜನೆಗಳನ್ನು ಜಾರಿಗೆ ತಂದಿದ್ದಾರೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಯೋಜನೆಯನ್ನು ಮರೆಯಲು ಸಾಧ್ಯವಿಲ್ಲ. ರೈತರಿಗೆ 10 ಎಚ್ಪಿ ವರೆಗೆ ಉಚಿತ ವಿದ್ಯುತ್, ರೈತರ ಮಕ್ಕಳಿಗೆ ವಿದ್ಯಾನಿಧಿ, ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ದುಡಿಯುವ ವರ್ಗಕ್ಕೆ ಶಕ್ತಿ: ಹೆಣ್ಣು ಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ, ಈ ಸಾಲಿನ ಆಯವ್ಯಯದಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 1000 ರೂ. ನೀಡಲಾಗುತ್ತಿದೆ. ರೈತರಿಗೆ 5 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ಉಚಿತ ಬಸ್ ಪಾಸ್, ಉಚಿತ ಶಿಕ್ಷಣ ನೀಡಿ, ಜನಕಲ್ಯಾಣಕ್ಕೆ ಒತ್ತು ನೀಡಲಾಗಿದೆ ಎಂದರು
ಇದನ್ನೂ ಓದಿ: ಲೋಕಾಯುಕ್ತ ದಾಳಿ ವಿಚಾರ... ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ