ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹೊಸಕೋಟೆಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಹೆಬ್ಬಾಳ, ಅತ್ತಿಬೆಲೆ, ಸರ್ಜಾಪುರ, ಆನೇಕಲ್, ಯಲಹಂಕಕ್ಕೆ ಸರ್ಕಾರದ ಸೂಚನೆಯಂತೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿದೆ. ಆದರೆ ಪ್ರಯಾಣಿಕರಿಲ್ಲದೆ ಬಸ್ಗಳು ಖಾಲಿ ಖಾಲಿಯಾಗಿವೆ.
ಕೊರೊನಾ ಸೋಂಕು ತಡೆಗಟ್ಟಲು ವಿಧಿಸಿರುವ ನಿಯಮಗಳಿಂದಾಗಿ ಪ್ರಯಾಣಿಕರು ಸಂಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ. ಮೇ 24ರಿಂದ ನಗರದಿಂದ ದೇವನಹಳ್ಳಿ, ವಿಜನಗರಕ್ಕೂ ಸಹ ಬಿಎಂಟಿಸಿ ಬಸ್ ಸಂಚಾರ ಪ್ರಾರಂಭಿಸಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದ್ದರೂ ಇನ್ನೂ ಸಹಜ ಸ್ಥಿತಿಗೆ ಮರಳದ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ಒಂದು ಬಸ್ ಕನಿಷ್ಟ 10-15 ನಿಮಿಷಗಳ ಕಾಲ ಪ್ರಯಾಣಿಕರ ಬರುವಿಕೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬಸ್ನಲ್ಲಿ ಕನಿಷ್ಠ ಐದರಿಂದ ಆರು ಜನ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ. ಹೊಸಕೋಟೆಯಿಂದ ಕೆ.ಆರ್.ಪುರದವರೆಗೆ 10ಕ್ಕೂ ಹೆಚ್ಚು ಬಸ್ ನಿಲ್ದಾಣಗಳಿವೆ. ಆದರೆ ಪ್ರಯಾಣಿಕರಿಲ್ಲದೆ ಬಸ್ಗಳು, ನಿಲ್ದಾಣಗಳು ಭಣಗುಡುತ್ತಿವೆ.
ಪ್ರಸ್ತುತ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಸ್ ಸಂಚಾರ ಮಾಡುತ್ತಿವೆ. ಎಲ್ಲಾ ಬಸ್‌ಗಳನ್ನು ಪ್ರಯಾಣ ಪ್ರಾರಂಭಗೊಳ್ಳುವ ಮೊದಲಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾರಂಭದಲ್ಲಿ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಿದ್ದು, ಇದೀಗ ಸಂಚರಿಸುವ ಸ್ಥಳಕ್ಕೆ ನಿಗದಿಪಡಿಸಿರುವ ದರಕ್ಕೆ ಟಿಕೆಟ್ ನೀಡುತ್ತಿದ್ದರೂ ಸಹ ನಿರೀಕ್ಷಿತ ಆದಾಯ ಗಳಿಕೆಯಾಗುತ್ತಿಲ್ಲ.
ಕೇವಲ ಬೆಳಿಗ್ಗೆ ಮತ್ತು ಸಂಜೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವವರು ಮಾತ್ರ ಹೆಚ್ಚಾಗಿ ಸಂಚರಿಸುತ್ತಿದ್ದು, ಬಹುತೇಕ ಪ್ರಯಾಣಿಕರು ಮಾಸಿಕ ಪಾಸ್ ಹೊಂದಿರುವವರೇ ಆಗಿದ್ದಾರೆ. ಆದರೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ. ನಗರದಲ್ಲಿ ಬಹಳಷ್ಟು ಪ್ರದೇಶಗಳಿಗೆ ಪ್ರವೇಶ ನಿಷೇಧಿಸಿರುವುದು, ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಭಾಗವಹಿಸಲು ನಿರ್ಬಂಧ ಹಾಕಿರುವುದು, ವಾಣಿಜ್ಯ ವಹಿವಾಟು ಪ್ರಾರಂಭಗೊಳ್ಳದಿರುವುದು ಪ್ರಯಾಣಿಕರ ಕೊರತೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.