ಬೆಂಗಳೂರು: ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಜನ ಸಂಕಲ್ಪ ಯಾತ್ರೆ ಹಾಗು ಮೋರ್ಚಾಗಳ ಸಮಾವೇಶದ ದಿನಾಂಕವನ್ನು ಮರು ನಿಗದಿಪಡಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಡಿಸೆಂಬರ್ 5 ರಂದು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತದೆ. ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೈಸೂರಿನಲ್ಲಿ ನಡೆಯಬೇಕಿದ್ದ ಎಸ್ಸಿ ಮೋರ್ಚಾ ಸಮಾವೇಶವನ್ನು ಚಿತ್ರದುರ್ಗಕ್ಕೆ ಸ್ಥಳಾಂತರ ಮಾಡುವ ಕುರಿತು ಚರ್ಚಿಸಲಾಗುತ್ತದೆ.
ಚಿತ್ರದುರ್ಗದಲ್ಲಿ ಸಮಾವೇಶ?: ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಬಳ್ಳಾರಿ ಭಾಗದಿಂದ ಮೈಸೂರಿಗೆ ಬರಲು ಜನರಿಗೆ ಕಷ್ಟವಾಗಲಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಎಸ್ಸಿ ಸಮಾವೇಶ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಹಾಗಾಗಿ ಈ ಕುರಿತು ಚರ್ಚಿಸಿ ಸ್ಥಳ ಬದಲಾವಣೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಸಮಾವೇಶಗಳ ಆಯೋಜನೆ: ಇನ್ನು ರೈತ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ ಸಮಾವೇಶಗಳ ದಿನಾಂಕಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಇದರ ಜೊತೆ ಎರಡು ತಂಡಗಳಲ್ಲಿ ನಡೆಯುತ್ತಿರುವ ಜನ ಸ್ಪಂದನ ಯಾತ್ರೆಯನ್ನು ಜನವರಿವರೆಗೂ ವಿಸ್ತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ವ್ಯವಸ್ಥಿತ ರೀತಿಯಲ್ಲಿ ಸಮಾವೇಶಗಳ ಆಯೋಜನೆ ಮತ್ತು ಜನಸಂಕಲ್ಪ ಯಾತ್ರೆ ಆಯೋಜನೆ ಮಾಡುವ ಕುರಿತು ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಹೈಕಮಾಂಡ್ ಸಂದೇಶದ ಕುರಿತು ಚರ್ಚೆ: ಇನ್ನು ಚುನಾವಣೆ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಸಮಾವೇಶಗಳು ಮತ್ತು ಜನ ಸಂಕಲ್ಪ ಯಾತ್ರೆಯ ನಂತರ ಕೈಗೊಳ್ಳಬೇಕಿರುವ ಪ್ರಚಾರ ಕಾರ್ಯದ ಕುರಿತು, ಹೈಕಮಾಂಡ್ ನೀಡುವ ಸಂದೇಶದ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ಸೇರಲು ರೌಡಿಗಳು ಪರೇಡ್ಗೆ ಸಜ್ಜಾಗಿದ್ದಾರೆ: ಸಿಎಂಗೆ ಬಾಂಬೆ ಬೊಮ್ಮಣ್ಣ ಎಂದು ಕಾಂಗ್ರೆಸ್ ಟ್ವೀಟ್ ಅಭಿಯಾನ